ಅಕ್ರಮ ಮರಳು ತಡೆಯುವ ನೆಪದಲ್ಲಿ ಹಣ ವಸೂಲಿ ದಂಧೆ: ಆರೋಪ

ಕಲಬುರಗಿ,ಜೂ.9: ಅಕ್ರಮ ಮರಳು ದಂಧೆ ತಡೆಯುವ ನೆಪದಲ್ಲಿ ಇಲಾಖೆಯವರು ಸಕ್ರಮ ಮರಳು ಸಾಗಣೆಯಲ್ಲಿ ತೊಡಗುವವರಿಗೆ ಹಣ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮೊಹ್ಮದ್ ಹನೀಫ್ ತಂದೆ ಅಬ್ಬಾಸ್ ಅಲಿ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದ ಮೊಬಿನ್ ಗಾರ್ಡ್‍ನ್ ಹತ್ತಿರದ ನಿವಾಸಿಯಾಗಿರುವೆ. ನಾನು ಲೋಕೋಪಯೋಗಿ ಹಾಗೂ ಪಂಚಾಯಿತಿರಾಜ್ ವ್ಯಾಪ್ತಿಯಲ್ಲಿ ನಿರ್ಮಾಣ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವೆ. ನಾನು ನಿಯಮಗಳ ಅಡಿಯಲ್ಲಿಯೇ ನನ್ನ ವಾಸ್ತವ್ಯದ ಸ್ಥಳದಲ್ಲಿ ಮರಳನ್ನು ಸಂಗ್ರಹಿಸಿರುವೆ. ಆದಾಗ್ಯೂ, ದೂರಿನ ಹಿನ್ನೆಲೆಯಲ್ಲಿ ನನ್ನ ಜೆಸಿಬಿ ವಾಹನವನ್ನು ವಶಪಡಿಸಿಕೊಂಡು 2000ರೂ.ಗಳಿಗಾಗಿ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ದೂರಿದರು.
ಭಾರತೀಯ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಚಿಂಚನಸೂರ್ ಅವರು ನೀಡಿದ ದೂರಿನ ಮೇರೆಗೆ ಭೂ ವಿಜ್ಞಾನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಶ್ರೀಮತಿ ಸರ್ಯಭಾಮಾ ಅವರು ಆಳಂದ್ ಚೆಕ್‍ಪೋಸ್ಟ್ ಬಳಿ ಇರುವ ಬೆಣ್ಣೂರ್ ಪೆಟ್ರೋಲ್ ಪಂಪ್ ಎದುರಿನ ಭಾಗದಲ್ಲಿ ಕಾರ್ಯಾಚರಣೆ ಮಾಡಿ, ನಾನು ಸಂಗ್ರಹಿಸಿದ್ದ ಮರಳನ್ನು ಅಕ್ರಮ ಎಂದು ಪರಿಗಣಿಸಿ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮರಳು ಸಂಗ್ರಹದ ಕುರಿತು ನನ್ನ ಹತ್ತಿರ ದಾಖಲೆಗಳಿವೆ. ರಾಯಲ್ಟಿ ಪ್ರಕಾರವೇ ನಾನು ಕ್ರಮ ಕೈಗೊಂಡಿದ್ದೇನೆ. ಆದಾಗ್ಯೂ, ನನ್ನದು ಅಕ್ರಮ ಎಂದು ಪರಿಗಣಿಸಿ ನನ್ನ ವಿರುದ್ಧ ದೂರನ್ನು ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ನನ್ನ ಜೆಸಿಬಿ ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆ ಕುರಿತು ಕೇಳಲು ಹೋದರೆ ಕಚೇರಿಗೆ ಬಾ, ಠಾಣೆಗೆ ಬಾ ಎಂದು ಹೇಳಿ ಸತಾಯಿಸುತ್ತಾರೆ. ಹಾಗೊಂದು ವೇಳೆ ನಾನು ಸಂಗ್ರಹಿಸಿದ ಮರಳು ಅಕ್ರಮವಾಗಿದ್ದರೆ ಆ ಮರಳನ್ನು ಜಪ್ತಿ ಮಾಡಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಜೆಸಿಬಿಯನ್ನು ವಶಡಿಸಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿರುವ ಅವರು, ಕೇವಲ ಹಣ ಸುಲಿಗೆ ಮಾಡುವ ಉದ್ದೇಶದಿಂದ ಈ ರೀತಿ ಸಕ್ರಮದಾರರಿಗೂ ಕಿರುಕುಳ ಕೊಡುತ್ತಿದ್ದಾರೆ. ಸಕ್ರಮ ಮರಳು ಸಾಗಣೆ ಮಾಡಿದರೂ ಸಹ 20,000ರೂ.ಗಳನ್ನು ಕೇಳುತ್ತಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದರು. ಸುದ್ದಿಗೋಷ್ಠಿಯಲ್ಲಿ ಭಾಷಾ ಪಟೇಲ್, ಮೆಹಬೂಬ್ ಪಟೇಲ್ ಮುಂತಾದವರು ಉಪಸ್ಥಿತರಿದ್ದರು.