ಅಕ್ರಮ ಮರಳು ಗಣಿಗಾರಿಕೆ :ಜಿಲ್ಲಾಡಳಿತ ವಿಫಲ-ಹನುಮಂತಪ್ಪ ಆರೋಪ

ರಾಯಚೂರು.ಮಾ.೨೫.ರಾಯಚೂರು, ಯಾದಗಿರಿ ಜಿಲ್ಲಾಡಳಿತಗಳು ಮರಳು ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟಲು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಭಂಗಿ ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಜಿಲ್ಲೆಯ ದೇವದುರ್ಗ, ಮಾನ್ವಿ ಹಾಗೂ ರಾಯಚೂರು ತಾಲೂಕಿನ ಕೃಷ್ಣಾ, ತುಂಗಭದ್ರಾ ಎರಡೂ ನದಿಗಳಿಗೆ ಸರ್ಕಾರ ಟೆಂಡರ್ ನೀಡಿದ್ದು, ಗುತ್ತೇದಾರರು ಟೆಂಡರ್ ನಿಯಮಗಳ ಪ್ರಕಾರ ಗಣಿಗಾರಿಕೆ ಮಾಡದೇ ನದಿಯಿಂದ ಸ್ಟಾಕ್‌ಯಾರ್ಡ್‌ಗೆ ಸಂಗ್ರಹ ಮಾಡದೇ ನೇರವಾಗಿ ನದಿಯಿಂದ ಸಾಗಾಣಿಕೆ ಮಾಡುತ್ತಿದ್ದಾರೆಂದು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರ ಕುಮ್ಮಕ್ಕಿನಿಂದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದು, ಈ ಕುರಿತಂತೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೃಷ್ಣಾ ನದಿಯಿಂದ ಟೆಂಡರ್ ಇಲ್ಲದೇ ೮೦೦-೧೦೦೦ಕ್ಕೂ ಅಧಿಕ ಟ್ರ್ಯಾಕ್ಟರ್‍ಗಳು ಸಾವಿರಾರು ಟ್ರಿಪ್ ಮರಳನ್ನು ಜಮೀನಿನಲ್ಲಿ ಸಂಗ್ರಹ ಮಾಡಿ ಹೊರ ಜಿಲ್ಲೆಗಳಿಗೆ ರಾಯಲ್ಟಿ ಇಲ್ಲದೇ ಇದೇ ರಾಯಲ್ಟಿಯಲ್ಲಿ ಸಾಗಾಣಿಕೆ ಮಾಡುತ್ತಾರೆ. ಇದು ಒಂದು ವರ್ಷದಿಂದ ಯಥೇಚ್ಛವಾಗಿ ನಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವುಂಟಾಗಿದೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಮುಖಂಡರು ಮತ್ತು ಅಧಿಕಾರಿಗಳ ಕುಮ್ಮಕ್ಕಿನಿಂದ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯಲು ಜಿಲ್ಲಾಡಳಿತಗಳು ಸಂಪೂರ್ಣ ವಿಫಲವಾಗಿವೆ. ಕೂಡಲೇ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.