
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೪- ರಾಜ್ಯದ ವಿವಿಧ ನಗರಸಭಾ, ಪುರಸಭಾ ವ್ಯಾಪ್ತಿಗಳಲ್ಲಿರುವ ಅನಧಿಕೃತ ಬಡಾವಣೆಗಳ ಮನೆಗಳು ಹಾಗೂ ನಿವೇಶನಗಳಿಗೆ ಒಂದು ಬಾರಿ ಡಿ ಖಾತೆಯನ್ನು ನೀಡಿ ಎಲ್ಲವನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಹರೀಶ್‌ಗೌಡ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹೀಂಖಾನ್ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಬೈರತಿ ಸುರೇಶ್, ನಗರ ಯೋಜನಾ ಇಲಾಖೆಯಿಂದ ಅನುಮೋದನೆಯಾಗದ ಬಡಾವಣೆಗಳಿಗೆ ಹಾಗೂ ಭೂಪರಿವರ್ತನೆಯಾಗದ ನಿವೇಶನಗಳು ಹಾಗೂ ಮನೆ ಕಟ್ಟಿಕೊಂಡಿರುವವರಿಗೆ ಡಿ ಖಾತಾ ನೀಡಿ ಆ ಮೂಲಕ ತೆರಿಗೆ ಸಂಗ್ರಹಿಸುವ ಚಿಂತನೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೂ ಮಾತನಾಡಿದ್ದೇನೆ. ಒಂದು ಬಾರಿ ಇವರಿಗೆಲ್ಲಾ ಬಿ ಖಾತೆ ನೀಡುವುದರಿಂದ ಸರ್ಕಾರಕ್ಕೂ ಸುಮಾರು ೨ ಸಾವಿರ ಕೋಟಿ ರೂ. ಆದಾಯ ಬರುತ್ತದೆ. ಹಾಗೆಯೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಭೂಪರಿವರ್ತನೆಯಾಗಿರುವ ನಿವೇಶನಗಳಿಗೆ ಎ ಖಾತೆ ನೀಡುತ್ತಿದ್ದೇವೆ. ಇಂತಹ ಮನೆ, ನಿವೇಶನಗಳಿಗೆ ಬಿ ಖಾತಾ ನೀಡಿ ಆ ಮೂಲಕ ಅವರಿಗೆ ಕಟ್ಟಡ ಕಟ್ಟಿಕೊಳ್ಳಲು ಪರವಾನಗಿ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಗ್ರಾಮಾಂತರ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಗೊಂಡಿರದ ಈ ಬಡಾವಣೆಗಳಿಗೆ ನಮೂನೆ ೩ ನೀಡುತ್ತಿಲ್ಲ. ಇದರಿಂದ ಖಾತೆಗಳು ಆಗುತ್ತಿಲ್ಲ. ಇವರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಪರಿಹಾರ ದೊರಕಿಸಿಕೊಡಬೇಕು ಎಂದು ಪ್ರಶ್ನೆ ಕೇಳಿದ ಹರೀಶ್‌ಗೌಡ ಸೇರಿದಂತೆ ಕೋನರೆಡ್ಡಿ, ಷಡಕ್ಷರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದರು. ಇವರುಗಳಿಗೆ ಖಾತೆಗಳನ್ನು ನೀಡದ ಕಾರಣ ಮಾಲೀಕತ್ವವೂ ಸಿಗುತ್ತಿಲ್ಲ. ಇದಕ್ಕೆಲ್ಲಾ ಪರಿಹಾರ ದೊರಕಿಸಿ ಎಂದು ಇವರುಗಳು ಒತ್ತಾಯಿಸಿದ್ದರು.