
ಕಲಬುರಗಿ,ಮೇ.9:ನಿನ್ನೆ ತಡರಾತ್ರಿ ಸಂಗಮೇಶ್ವರ ಬಡಾವಣೆಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಹಣ ಹಾಗೂ ಮದ್ಯ ವಿತರಣೆ ಮಾಡುತ್ತಿರುವ ಕುರಿತು ಸ್ವತಃ ಜಿಲ್ಲಾಧಿಕಾರಿಗಳು ಪೊಲೀಷ್ ಕಮೀಷನರ್ ಗೆ ದೂರು ಸಲ್ಲಿಸಿದರೂ ಕೂಡಾ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಈ ಕುರಿತು ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡುತ್ತಿದ್ದ ಅವರು, ಸ್ವತಃ ಜಿಲ್ಲಾಧಿಕಾರಿಗಳೇ ದೂರು ಸಲ್ಲಿಸಿದ ಮೇಲೂ ಪ್ರಕರಣ ದಾಖಲಾಗಿಲ್ಲ ಎಂದರೆ ಹೇಗೆ ? ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಕಾರಿಗಳು ಸಲ್ಲಿಸಿದ ದೂರಿನ ಪ್ರತಿಯ ಬರಹವನ್ನು ಓದಿದ ಖರ್ಗೆ, ನಿನ್ನೆ ರಾತ್ರಿ 11.50 ಕ್ಕೆ ಜಿಲ್ಲಾಧಿಕಾರಿಗಳು ಚುನಾವಣಾ ನಿಮಿತ್ತ ಗಸ್ತಿನಲ್ಲಿದ್ದಾಗ ನಗರದ ಸಂಗಮೇಶ್ವರ ಬಡಾವಣೆಯ ಹತ್ತಿರ ಅಕ್ರಮ ಮದ್ಯ ಹಾಗೂ ಹಣ ವಿತರಣೆ ಮಾಡುತ್ತಿರುವ ಕುರಿತು ಕರೆ ಬಂದಾಗ ಖುದ್ದಾಗಿ ಸ್ಥಳಕ್ಕೆ ದಾವಿಸಿದ್ದಾರೆ. ಆಗ ಅಲ್ಲಿ ಬಿಳಿ ಬಣ್ಣದ ಇನ್ನೋವಾ ವಾಹನ ಕಂಡು ಬಂದಿದ್ದು ಅದರಲ್ಲಿ ಮೂವರು ಸವಾರರಿರುತ್ತಾರೆ. ಅವರನ್ನ ವಿಚಾರಣೆ ಮಾಡಲು ಮುಂದಾದಾಗ ಸದರಿ ವಾಹನ ಅಜಾಗೂಕತೆಯಿಂದ ಸ್ಥಳದಿಂದ ನಿರ್ಗಮಿಸಿರುತ್ತದೆ. ಆಗ ವಾಹನವನ್ನು ಬೆನ್ನಟ್ಟಿ ವಿದ್ಯಾನಗರದ ಹನುಮಾನ ದೇವಾಲಯದ ಹತ್ತಿರ ತಡೆಗಟ್ಟಿದಾಗ ಅದರಲ್ಲಿದ್ದ ಮೂವರ ಪೈಕಿ ಒಬ್ಬ ಬ್ಯಾಗಿನೊಂದಿದೆ ಪರಾರಿಯಾಗಿದ್ದು ಉಳಿದಿಬ್ಬರನ್ನು ಕಚೇರಿ ಸಿಬ್ಬಂದಿಗಳು ಹಿಡಿದಿರುತ್ತಾರೆ. ಈ ಕುರಿತು ಜಿಲ್ಲಾಧಿಕಾರಿಗಳಯ ಲಿಖಿತ ದೂರು ಸಲ್ಲಿಸಿ ಭಾರತೀಯ ದಂಡ ಸಂಹಿತೆ ಕಲಂ 171 H, 321 ಹಾಗೂ 353 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿರುತ್ತಾರೆ ಎಂದು ಖರ್ಗೆ ವಿವರಿಸಿದರು.
ಮುಂದುವರೆದು ಮಾತನಾಡಿದ ಪ್ರಿಯಾಂಕ್ ಖರ್ಗೆ, ಆ ವಾಹನದಲ್ಲಿ ಮದ್ಯ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೆಯ ಪಾಟೀಲ ರೇವೂರು ಅವರ ಪಾಂಪ್ಲೇಂಟ್ ಹಾಗೂ ಪುಸ್ತಿಕೆಗಳು ಮತ್ತು ಒಂದು ಮೊಬೈಲ್ ಫೋನ್ ಕೂಡ ಸಿಕ್ಕಿರುತ್ತದೆ. ಈ ವಾಹನ ಯಾರಿಗೆ ಸೇರಿದ್ದು ಹಾಗೂ ಮೊಬೈಲ್ ಯಾರದ್ದು? ಓಡಿಹೋದವರು ಯಾರು ? ಎನ್ನುವ ಕುರಿತು ಸಮಗ್ರ ತನಿಖೆಯಾಗಬೇಕು. ಶಾಸಕರ ಮೊಬೈಲ್ ಟವರ್ ಲೊಕೇಷನ್ ಹಾಕಲಿ ಆ ಸಮಯದಲ್ಲಿ ಶಾಸಕರು ಎಲ್ಲಿದ್ದರು ಎಂದು ಗೊತ್ತಾಗುತ್ತದೆ. ಒಂದು ವೇಳೆ ಮೊಬೈಲ್ ವಿಚಾರ ಎಫ್ ಐ ಆರ್ ನಲ್ಲಿ ದಾಖಲಿಸದಿದ್ದರೆ ಹಾಗೂ ಸರಿಯಾದ ತನಿಖೆ ನಡೆಯದೆ ಇದ್ದರೆ ಅಧಿಕಾರಿಗಳು ಕೂಡಾ ಶಾಮೀಲಾಗಿದ್ದಾರೆ ಎನ್ನುವುದು ನನ್ನ ಆರೋಪ ಎಂದು ಅವರು ಹೇಳಿದರು.
ಅಚ್ಚರಿ ಎಂದರೆ ಇಡೀ ಪ್ರಹಸನಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿರುವ ರೇವೂರು ಅವರು ಸ್ವತಃ ಜಿಲ್ಲಾಧಿಕಾರಿ ಗಳೇ ಈ ಕುರಿತು ಲಿಖಿತ ದೂರು ಸಲ್ಲಿಸಿದ್ದಾರೆ ಎನ್ನುವುದನ್ನು ಗಮನಿಸಲಿ. ಅಲ್ಲಿ ಚುನಾವಣೆ ಅಕ್ರಮ ನಡೆಯುತ್ತಿರಲೇ ಇಲ್ಲ ಎಂದಾದರೆ ಓಡಿಹೋಗಿದ್ದು ಯಾಕೆ? ಅಲ್ಲೇ ಇದ್ದು ಸ್ಪಷ್ಟೀಕರಣ ಕೊಡಬೇಕಿತ್ತಲ್ಲವೇ? ಸಿಕ್ಕಿಬಿದ್ದ ವ್ಯಕ್ತಿಯನ್ನ ಬಲಿಪಶು ಮಾಡುವ ಬದಲು ಶಾಸಕರೇ ಬಂದು ಅವರನ್ನ ಬಿಡಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ಲೇಪವಾಗುತ್ತಿದೆ ಎಂದ ಅವರು ಇಷ್ಟುದಿನ ಇಲ್ಲದ ಲಿಂಗಾಯತರ ಬಗ್ಗೆ ಶಾಸಕರಿಗೆ ಈಗ ಕಾಳಜಿ ಶುರುವಾಗಿದೆ. ಲಿಂಗಾಯತರಿಗೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾದಾಗ ಆ ಪ್ರೀತಿ ಇರಲಿಲ್ಲವೇ?ಎಂದು ಖಾರವಾಗಿ ಪ್ರಶ್ನಿಸಿದರು.
ಶಾಸಕರು ಈಗಲಾದರೂ ಸತ್ಯ ಹೇಳುವುದನ್ನು ಕಲಿಯಲಿ. ಕೆಕೆಆರ್ ಡಿಬಿಗೆ ಬಿಡುಗಡೆ ಅನುದಾನವನ್ನು ಸಮರ್ಪಕ ವಾಗಿ ಬಳಸದೆ ತಮ್ಮ ಸ್ವಂತ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಯ ಬಳಸಿರುವುದು ಸಿಐಜಿ ವರದಿಯಲ್ಲಿದೆ ಎಂದರು.
ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ, ಮಾಜಿ ಮೇಯರ್ ಶರಣು ಮೋದಿ ಹಾಗೂ ಇತರರಿದ್ದರು.