ಅಕ್ರಮ ಮದ್ಯ ಮಾರಾಟ ತಡೆಗೆ ಸಚಿವರ ಖಡಕ್ ಸೂಚನೆ


ಕುಂದಗೋಳ ಜು.29: ರಾಜ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕುಂದಗೋಳ ತಾಲೂಕಿನಲ್ಲಿ ಮಳೆಗೆ ಹಾನಿಯಾದ ಮನೆ, ಹೊಲ ಗದ್ದೆ, ರಸ್ತೆ, ಸೇತುವೆ ವೀಕ್ಷಿಸಿದ ನಂತರ ಪರಿವೀಕ್ಷಣಾ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಅಬಕಾರಿ, ಕಂದಾಯ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಪಶುಸಂಗೋಪನೆ, ಹೆಸ್ಕಾಂ, ಆರೋಗ್ಯ, ಶಿಕ್ಷಣ ಇಲಾಖೆಗಳು ಸೇರಿದಂತೆ ಹಲವಾರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಸಂತೋಷ ಲಾಡ್ ಅವರು ಎಚ್ಚರಿಕೆ ನೀಡುತ್ತ ಅಧಿಕಾರಿಗಳೆಲ್ಲ ನಿಮ್ಮ ಕಾರ್ಯ ಕೇಂದ್ರ ಸ್ಥಾನ ಕುಂದಗೋಳದಲ್ಲಿ ಎಲ್ಲರೂ ವಾಸವಾಗಿರಲೇಬೇಕು ಎಂದು ಸೂಚಿಸಿದರು.
ಅಕ್ರಮ ಮದ್ಯ:
ಅನೇಕ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಸರಾಯಿ ಮಾರಲಾಗುತ್ತಿದೆ, ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಬಕಾರಿ ಅಧಿಕಾರಿ ಲಮಾಣಿ ಅವರನ್ನು ಪ್ರಶ್ನಿಸಿ ಅನಧಿಕೃತ ಮಾರುವವರನ್ನು ಕೂಡಲೇ ಬಂಧಿಸಿ, ಅದಕ್ಕೆ ಸಹಕಾರ ನೀಡುವವರಿಗೆ ಹಾಗೂ ಸಹಕರಿಸುವ ಅಂಗಡಿಕಾರರ ಪರವಾನಗಿ ರದ್ದು ಮಾಡಲಾಗುತ್ತದೆ. ಜತೆಗೆ ಆ ಪ್ರದೇಶದ ಅಬಕಾರಿ ಅಧಿಕಾರಿಯನ್ನು ತಕ್ಷಣ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಲಾಗುತ್ತದೆ. ಖಚಿತ ಮಾಹಿತಿ ನೀಡಿದವರಿಗೆ 5 ಸಾ.ರೂ ಬಹುಮಾನ ನೀಡಲಾಗುತ್ತದೆ ಎಂದು ಘೋಷಿಸಿದರಲ್ಲದೆ, ಆಯಾ ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಹಾಕಿಸಲು ತಿಳಿಸಬೇಕು ಎಂದು ಅಬಕಾರಿ ಅಧಿಕಾರಿ ಲಮಾಣಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಕುಂದಗೋಳ ಪಟ್ಟಣದಲ್ಲಿ ವಾಸಿಸಲು ಮನೆಯಿಲ್ಲದ ಬಡಜನರ ಮನೆ ನಿರ್ಮಾಣಕ್ಕಾಗಿ ಜಾಗವನ್ನು ಸಿದ್ಧಗೊಳಿಸಿ, ಫಲಾನುಭವಿಗಳು ಅರ್ಜಿ ಸಲ್ಲಿಸಲು ಕುಂದಗೋಳ ತುಂಬಾ ಡಂಗುರ ಸಾರಿಸಿ, ಸಾವಿರಕ್ಕೂ ಹೆಚ್ಚು ಮನೆ ನಿರ್ಮಾಣಕ್ಕೆ ಅನುಮತಿ ಕೊಡಿಸುತ್ತೇನೆ, ಪ್ರಸ್ತಾವನೆ ಕಳುಹಿಸಿ ಕೊಡಿ ಎಂದು ಪ. ಪಂ ಮುಖ್ಯಾಧಿಕಾರಿ ಎನ್. ಕೆ. ಡೊಂಬರ ಅವರಿಗೆ ಸೂಚಿಸಿದರು.
ನಂತರ ಕ್ರೀಡಾಂಗಣ, ಬಸ್ ಡಿಪೆÇೀ, ಸೈಕಲ್ ಭಾಗ್ಯ, ಆಧಾರ ಸೇವಾ ಕೇಂದ್ರ ಹೆಚ್ಚಳ, ಸಂಸ್ಕರಣಾ ಘಟಕ, ಆರೋಗ್ಯ ಸಿಬ್ಬಂದಿ ಹೆಚ್ಚಳ, ಪಶುಸಂಗೋಪನೆ ಸಲಕರಣೆ, ವಿಮೆ ಬಿಡುಗಡೆ ಕುರಿತಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕ ಎಂ. ಆರ್. ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಉಪ ಜಿಲ್ಲಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ್ ಪರಮಾನಂದ, ತಾ. ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುರಿಯವರ ಇದ್ದರು.