ಅಕ್ರಮ ಮದ್ಯ ಮಾರಾಟ ತಡೆಗೆ ಅಂಕುಶ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೩- ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ರೂಟ್‌ಗಳಲ್ಲಿ ನಿರಂತರ ಗಸ್ತು ಪಹರೆ ಹಾಕಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿಧಾನಪರಿಷತ್‌ನಲ್ಲಿಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಬಗ್ಗೆ ಅನೇಕ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಮಂಜನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅಬಕಾರಿ ಕಾಯ್ದೆ ಮತ್ತು ನಿಯಮವಾಳಿಗಳ ಅನುಸಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆ ಹಾಗೂ ವಲಯ ವ್ಯಾಪ್ತಿಗಳಲ್ಲಿ ನಿರ್ಧರಿಸಿರುವ ಮಾರ್ಗಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ನಿಯಮಿತವಾಗಿ ತಪಾಸಣೆ ನಡೆಸಲು ಸೂಚಿಸಲಾಗಿದೆ. ಇದರ ಜತೆಗೆ ಆಯಾ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗಳು ಮತ್ತು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟಿರುವುದನ್ನು ಬಳಸಿಕೊಂಡು ಅವರೇ ನಗರ ಪ್ರದೇಶಗಳಲ್ಲಿ ಅದೇ ಪರವಾನಗಿ ಅಡಿ ಅಗಂಡಿ ತೆರೆಯಲು ಅವಕಾಶ ನೀಡುವುದಿಲ್ಲ. ಆದರೆ, ನಗರ ಪ್ರದೇಶದಲ್ಲಿರುವ ಪರವಾನಗಿದಾರರು ಜಿಲ್ಲೆಯಿಂದ ತಾಲ್ಲೂಕು, ತಾಲ್ಲೂಕಿನಿಂದ ಹೋಬಳಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾದರೆ ಅದಕ್ಕೆ ಅನುಮತಿ ನೀಡಲಾಗಿದೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಪರವಾನಗಿ ಪಡೆದು ನಗರ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.