ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.21: ತಾಲೂಕಿನಾದ್ಯಂತ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಒತ್ತಾಯಿಸಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಬಕಾರಿ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕು ಕರವೇ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿಯ ಮುಂದೆ ಜಮಾವಣೆಗೊಂಡ ಕರವೇ ಕಾರ್ಯಕರ್ತರು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಕ್ರಮ ಮದ್ಯ ಮಾರಾಟದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ತಾಲೂಕು ಕರವೇ ಅಧ್ಯಕ್ಷ ಡಿ.ಎಸ್.ವೇಣು ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ಸೇರಿದಂತೆ ದಲಿತ ಕೇರಿಗಳ ಮನೆಗಳಲ್ಲಿ ಕಾನೂನುಬಾಹಿರವಾಗಿ ಅಕ್ರಮ ಮಧ್ಯ ಮಾರಾಟ ದಂಧೆ ನಡೆಯುತ್ತಿದೆ. ಕುಡುಕರ ಹಾವಳಿಯಿಂದಾಗಿ ಗ್ರಾಮಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ವೈನ್ ಸ್ಟೋರ್ ಮಾಲೀಕರು ತಮ್ಮ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಬೇಕೇ ಹೊರತು ತಮ್ಮ ಮಳಿಗೆಗಳಲ್ಲಿಯೇ ಮದ್ಯ ಪಾನಕ್ಕೆ ಅವಕಾಶ ನೀಡಬಾರದು.
ಆದರೆ ವೈನ್ ಸ್ಟೋರ್ ಮಾಲೀಕರು ನಿಯಮಗಳನ್ನು ಮೀರಿ ಪರವಾನಿಗೆ ಇಲ್ಲದಿದ್ದರೂ ಚಿಲ್ಲರೆಯಾಗಿ ಮಧ್ಯ ಮಾರಾಟ ಮಾಡಿ ಕುಡಿಯಲು ಅವಕಾಶ ಮಾಡಿಕೊಡುತ್ತಿರುವುದರಿಂದ ಕುಡುಕರ ಸಂಖ್ಯೆಯು ಹೆಚ್ಚಾಗಿದೆ, ಗಲಾಟೆ ಗದ್ದಲಗಳು ಜೋರಾಗಿದೆ, ಗ್ರಾಮಗಳಲ್ಲಿ ನೆಮ್ಮದಿ ವಾತಾವರಣ ಮಾಯವಾಗಿ ಅಶಾಂತಿ ವಾತಾವರಣ ನೆಲೆಸಿದೆ. ಮಿತಿಮೀರಿದ ಕುಡುಕರ ಹಾವಳಿಯಿಂದ ಮಹಿಳೆಯರು ಹಾಲಿನ ಡೈರಿಗಳಿಗೆ ಹಾಲು ಹಾಕಲು ಹೋಗಲಾರದಂತಹ ವಾತಾವರಣ ನಿರ್ಮಾಣವಾಗಿದೆ.
ಪ್ರವಾಸೋದ್ಯಮ ಉತ್ತೇಜನ ಹೆಸರಿನಲ್ಲಿ ಸಿಎಲ್-7 ಮದ್ಯ ಮಾರಾಟ ಮಳಿಗೆಗಳನ್ನು ತೆರಯಲಾಗಿದೆ. ಸಿಎಲ್-7 ಮದ್ಯ ಮಾರಾಟಗಾರರು ತಮ್ಮ ಬಾಡಿಗೆದಾರರು ತಂಗಿರುವ ರೂಮುಗಳಿಗೆ ಮಾತ್ರ ಮದ್ಯ ವಿತರಿಸಬೇಕು. ಆದರೆ ನಿಯಮ ಮೀರಿ ಸಿಎಲ್-7 ಮಳಿಗೆದಾರರೂ ಚಿಲ್ಲರೆ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶದ ಪೆಟ್ಟಿಗೆ ಅಂಗಡಿಗಳು ಮತ್ತು ಕೆಲವು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಯುವಕರು ಮದ್ಯ ವ್ಯಸನಿಗಳಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಆದ್ದರಿಂದ ಅಬಕಾರಿ ಅಧಿಕಾರಿಗಳು ಕೂಡಲೇ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ನಿರ್ದಾಕ್ಷಣ್ಯ ಕ್ರಮವನ್ನು ಕೈಗೊಂಡು ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಬೇಕು. ಕುಡಿತದ ದುಶ್ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವ ಜನಾಂಗಕ್ಕೆ ಸಂರಕ್ಷಿಸುವ ಕೆಲಸ ಮಾಡಬೇಕು. ಅಕ್ರಮ ಮದ್ಯ ಮಾರಟವನ್ನು ತಡೆಗಟ್ಟಿ ಅಬಕಾರಿ ಅಧಿಕಾರಿಗಳು ಸಮಾಜವನ್ನು ಉಳಿಸುವಂತೆ ಆಗ್ರಹಿಸಿ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಕರವೇ ಪದವೀಧರ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಕರವೇ ನಗರ ಘಟಕದ ಅಧ್ಯಕ್ಷ ಮದನ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಟೆಂಪೆÇೀ ಶ್ರೀನಿವಾಸ್, ಹೊಸಹೊಳಲು ಗೋಪಿ, ಆನಂದ್, ಹರೀಶ, ಸಾಗರ್, ಜಹೀರ್ ಅಹಮದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದು ಅಬಕಾರಿ ಉಪ ನಿರೀಕ್ಷಕ ರಾಚಪ್ಪಾಜಿ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.