ಅಕ್ರಮ ಮದ್ಯ: ಆರೋಪಿ ಸೆರೆ

ಮಂಗಳೂರು, ಮೇ ೧- ನಗರ ಹೊರವಲಯದ ತಲಪಾಡಿ ಚೆಕ್‌ಪೋಸ್ಟ್ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಶುಕ್ರವಾರ ‌ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಬಾರ್‌ನ ಕ್ಯಾಶಿಯರ್ ಚರಣ್ (22) ಎಂಬಾತನನ್ನು ಬಂಧಿಸಿದ್ದಾರೆ. ಸುಮಾರು 52 ಬಾಕ್ಸ್‌ನಲ್ಲಿ ಶೇಖರಿಸಲ್ಪಟ್ಟಿದ್ದ ವಿವಿಧ ಬ್ರಾಂಡ್‌ನ ಮದ್ಯದ ಮೌಲ್ಯ 1.53 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇದನ್ನು ತೊಕ್ಕೊಟ್ಟಿನ ವೈನ್‌ಶಾಪ್‌ನಿಂದ ತರಲಾಗಿದ್ದು, ಕೇರಳಕ್ಕೆ ಸಾಗಿಸಲು ಸಿದ್ಧತೆ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ‌. ಬಾರ್‌ನ ಲೈಸನ್ಸ್ ಹೊಂದಿರುವ ದಿವ್ಯರಾಜ್ ಶೆಟ್ಟಿ ಮತ್ತು ಹೈಸ್ಪಿರಿಟ್ ವೈನ್ ಶಾಪ್‌‌ನ ಮ್ಯಾನೇಜರ್ ರೋಹಿತ್ ಎಂಬವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.