ಅಕ್ರಮ ಮಣ್ಣು ಗಣಿಗಾರಿಕೆ ಕಣ್ಮುಚ್ಚಿ ಕುಳಿತ ಕಂದಾಯ ಇಲಾಖೆ

ಹನೂರು: ಜೂ.07: ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದ ಪರಾಮಾವಧಿಯಿಂದ ಅಕ್ರಮ ಮಣ್ಣು ಗಣಿಗಾರಿಕೆ ಹನೂರು ಕ್ಷೇತ್ರ ವ್ಯಾಪ್ತಿಯ ಇಕ್ಕಡಳ್ಳಿ ಗ್ರಾಮದ ಸರ್ವೇ ನಂಬರ್‍ಗಳಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಕೇವಲ 2 ಎಕರೆ ಮಣ್ಣು ಗಣಿಗಾರಿಕೆಗೆ ಅನುಮತಿ ಪಡೆದು ಬರೊಬ್ಬರಿ 20 ಕ್ಕೂ ಹೆಚ್ಚು ಎಕರೆಯಷ್ಟು ಮಣ್ಣು ಗಣಿಗಾರಿಕೆ ನಡೆದಿರುವುದರ ಹಿಂದೆ ವ್ಯಾಪಾಕ ಭ್ರಷ್ಟಚಾರ ನಡೆದಿದೆ ಎನ್ನಲಾಗುವ ಮಾತುಗಳು ಕೇಳಿ ಬರುತ್ತಿವೆ.
ಪ್ರಕರಣದ ವಿವರ: ಕೊಳ್ಳೇಗಾಲ ಹನೂರು ಮುಖ್ಯ ರಸ್ತೆಯ ಕೆಶಿಫ್ ಕಾಮಗಾರಿಗೆ ಹುಬ್ಬಳ್ಳಿ ಎಂ/ಎಸ್ ಡಿ.ಆರ್.ಎನ್.ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸಂಸ್ಥೆಯವರು ಮಣ್ಣು ಗಣಿಗಾರಿಕೆ ನಡೆಸಲು ಅನುಮತಿ ಕೋರಿರುವ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಛೇರಿ ಚಾಮರಾಜನಗರ ಇವರು ಇಕ್ಕಡಳ್ಳಿ ಗ್ರಾಮದ ರಾಚಮ್ಮ ಕೋಂ ಲೇಟ್ ಹುಚ್ಚಯ್ಯ ಅವರಿಗೆ ಸೇರಿದ 564/1 ರ ಸರ್ವೇ ನಂಬರ್ 3.84 ಎಕರೆ ಜಮೀನಿನ ಪೈಕಿ 2 ಎಕರೆಯಲ್ಲಿ 12141 ಮೆಟ್ರಿಕ್ ಟನ್ ಮಣ್ಣು ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ. ಆದರೆ ಡಿ.ಆರ್.ಎನ್.ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ. ಸಂಸ್ಥೆಯವರು ಕೊಳ್ಳೇಗಾಲ ತಾಲ್ಲೂಕು ಪಾಳ್ಯ ಹೋಬಳಿ ಇಕ್ಕಡಳ್ಳಿ ಸರ್ವೇ ನಂಬರ್‍ಗಳಾದ 740, 749, 752, 756 ಇನ್ನಿತರೆ ಜಮೀನುಗಳಲ್ಲಿ ಕಳೆದ 3 ತಿಂಗಳುಗಳಿಂದ 2 ಹಿಟಾಚಿ 20 ಟಿಪ್ಪರ್‍ಗಳು ಹಾಗೂ 15 ಟ್ರಾಕ್ಟರ್‍ಗಳ ಮೂಲಕ 20 ಎಕರೆಗೂ ಹೆಚ್ಚು ಜಮೀನುಗಳಲ್ಲಿ 15 ಅಡಿಗಳ ಆಳದಿಂದ ಮಣ್ಣು ಗಣಿಗಾರಿಕೆ ನಡೆಸಿದ್ದಾರೆ.
ಮಣ್ಣು ಗಣಿಗಾರಿಕೆ ವ್ಯಾಪಾಕವಾಗಿ ನಡೆಯುತ್ತಿದ್ದರೂ ಇಲ್ಲಿನ ಗ್ರಾಮ ಲೆಕ್ಕಿಗ ಕುಮಾರ್, ರಾಜಸ್ವ ನಿರೀಕ್ಷಕ ಮಾದೇವಸ್ವಾಮಿ ಯಾವುದೋ ಒತ್ತಡಕ್ಕೋ ಅಥಾವ ಭ್ರಷ್ಟಚಾರಕ್ಕೆ ಸಿಲುಕೀಯೋ ? ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಂಜೆವಾಣಿ ಪತ್ರಿಕೆ ವರದಿಗಾರರು ರಾಜಸ್ವ ನಿರೀಕ್ಷಕರಲ್ಲಿ ಈ ಬಗ್ಗೆ ಸ್ಪಷ್ಟನೆ ಕೇಳಿದಾಗ ಮಣ್ಣು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಛೇರಿಯಿಂದ ಅನುಮತಿ ಪಡೆಯಲಾಗಿದೆ ಸ್ಥಳಿಯರ ತಕರಾರು ಇಲ್ಲ ನಿಮ್ಮದೇನು ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ. ಇದೇ ರೀತಿ ಗ್ರಾಮ ಲೆಕ್ಕಾಧಿಕಾರಿಯವರನ್ನು ವಿಚಾರಿಸಿದಾಗ 20 ಎಕರೆಯಷ್ಟು ಮಣ್ಣು ಗಣಿಗಾರಿಕೆ ನಡೆದಿರುವುದು ನನಗೆ ತಿಳಿದಿಲ್ಲ ಎಂದು ಒಮ್ಮೆ ಉತ್ತರಿಸಿದರೆ ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಇಷ್ಟೊಂದು ಮಣ್ಣು ಗಣಿಗಾರಿಕೆ ನಡೆದಿರುವ ವೇಳೆ ನಾನು ಕೊವೀಡ್ ಡ್ಯೂಟಿಲಿ ಇದ್ದೆ ಎಂದು ಹೇಳುತ್ತಾರೆ.
ಸ್ಥಳಿಯ ಭೂ ಮಾಲೀಕರು ಇದು ಕಳೆದ 3 ತಿಂಗಳುಗಳಿಂದ ನಡೆಯುತ್ತಿದೆ. ಗ್ರಾಮ ಲೆಕ್ಕಿಗರಿಗೆ ತಿಳಿಯದ ವಿಚಾರವಲ್ಲ. ಅವರಿಗೆ ಗೊತ್ತಿದೆ ಎಂದು ನುಡಿಯುತ್ತಾರೆ. ಗ್ರಾಮ ಲೆಕ್ಕಿಗ ಹೇಳಿಕೆಗಳು ಗೊಂದಲಮಯವಾಗಿದ್ದು, ಇದರಲ್ಲಿ ಗ್ರಾಮ ಲೆಕ್ಕಿಗನ ಕೈವಾಡ ಹೆಚ್ಚಾಗಿರುವ ಶಂಕೆ ಇದೆ. ಗ್ರಾಮ ಲೆಕ್ಕಿಗ ಹಾಗೂ ರಾಜಸ್ವ ನಿರೀಕ್ಷಕರು ತಹಶೀಲ್ದಾರ್ ಕುನಾಲ್ ಅವರಿಗೆ ಸ್ಪಷ್ಟ ಮಾಹಿತಿ ನೀಡದೆ ದಿಕ್ಕು ತಪ್ಪಿಸುತ್ತಿದ್ದಾರೆ ಎನ್ನುವ ಅನುಮಾನ ಕಾಡತೊಡಗಿದೆ. ಅಕ್ರಮ ಮಣ್ಣು ಗಣಿಗಾರಿಕೆ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ತನಿಖೆಯನ್ನು ಕೈಗೊಂಡರೆ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗನ ಕಾರ್ಯವೈಖರಿ ಬಯಲಿಗೆ ಬರುತ್ತದೆ ಎಂದು ಭೂ ಮಾಲೀಕರು ಮತ್ತು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.