
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.8: ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತಾವಧಿಯಲ್ಲಿ ಸರ್ಕಾರಿ ಭೂಮಿ ಕಬಳಿಕೆಯಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಭೂ ಕಬಳಿಕೆಯ ವಿರುದ್ಧ ನಾವುಗಳು ಇದ್ದು, ಅಕ್ರಮ ಭೂ ಕಬಳಿಕೆಯ ಸಮಗ್ರ ತನಿಖೆಯಾಗಲಿ ಎಂದು ಮಾಜಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೩ ನೇ ವಾರ್ಡ್ ನ ಎಸ್.ಎಸ್. ಬಡಾವಣೆಯಲ್ಲಿ ಖಾಲಿ ನಿವೇಶನವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ವಿಷಯ ಪರಿಶೀಲಿಸಲಾಗಿ ನಿವೇಶನ ಅಕ್ರಮ ಇದೇ ಜೂನ್ ತಿಂಗಳಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ ಎಂದು ದಾಖಲೆ ತೋರಿಸಿದರು.ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ಅಕ್ರಮ ಎಂದು ಅವರು ಹೊಣೆ ಹೊರದೇ ಬಿಜೆಪಿ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಎಂದರು.ಸರ್ಕಾರ ಅವರದ್ದೇ ಇರುವಾಗ ಅಕ್ರಮವಾಗಿದ್ದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ತರಾತುರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು ಏಕೆ? ಎಂದು ಪ್ರಶ್ನಿಸಿದ ಅವರು, ಇದು ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸವಾಗಿದೆ ಎಂದರು.ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ದಾವಣಗೆರೆ ಉತ್ತರ ಹಾಗೂ ದಕ್ಷಿಣದಲ್ಲಿ ಆಶ್ರಯ ಮನೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಆರೋಪ ಮಾಡಿದ್ದಾರೆ. ದಕ್ಷಿಣದಲ್ಲಿ ಕಾಂಗ್ರೆಸ್ ನ ಶಾಸಕರೇ ಇದ್ದು, ಅವರ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ಅವರೇ ಹೇಳಿದಂತಾಗಿದೆ ಎಂದರು.ಈ ರೀತಿಯ ಅಕ್ರಮ ಭೂ ಕಬಳಿಕೆಯ ವಿರುದ್ಧ ಬಿಜೆಪಿಯ ಎಲ್ಲಾ ಸದಸ್ಯರು. ಜೀರೋ ಟಾಲರೆನ್ಸ್ ಹೊಂದಿದ್ದು, ಕೂಡಲೇ ೨೦೧೩ ರಿಂದ ನಡೆದಿರುವ ಅಕ್ರಮಗಳ ಕುರಿತು ತನಿಖೆಯಾಗಲಿ ಎಂದು ಸರ್ಕಾರವನ್ನು ಆಗ್ರಹಿಸುವುದಾಗಿ ಉಪ ಮೇಯರ್ ಯಶೋಧಾ ಯಗ್ಗಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರುಗಳಾದ ರೇಖಾ ಗಂಡಗಾಳೆ,ಕೆ.ಎನ್ ವೀರೇಶ್,ಸೋಗಿ ಶಾಂತಕುಮಾರ್,ಎಲ್.ಡಿ ಗೋಣೆಪ್ಪ,ಶಿವಾನಂದ್, ಪಕ್ಷದ ಮುಖಂಡರಾದ ಸುರೇಶ್,ನಾಗಪ್ಪ,ಶ್ರೀನಿವಾಸ್ ಉಪಸ್ಥಿತರಿದ್ದರು.