ಅಕ್ರಮ ಬೇಟೆಗೆ ಹೊಂಚು ಹಾಕುತ್ತಿದ್ದವನ ಬಂಧನ

ಹನೂರು, ನ.13: ಅಕ್ರಮ ಅರಣ್ಯ ಪ್ರವೇಶ ಮಾಡಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಗಳ ಸಹಿತ ಬಂದೂಕು ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಕಾವೇರಿ ವನ್ಯ ಜೀವಿಧಾಮದ ಮೇಟುಗಲು ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಹನೂರು ತಾಲ್ಲೂಕಿನ ಗೋಪಿನಾಥಂ ಬಳಿಯ ಆತೂರ ಗ್ರಾಮದ ಅಯನ್ ಬಿನ್ ಕಾವೇರಿ, ಮಾರೀಮುತ್ತು ಬಿನ್ ಪಚ್ಚೀಯಣ್ಣನ್, ಶಿವಕುಮಾರ್ ಬಿನ್ ಮುರುಗ ಬಂಧಿತ ಆರೋಪಿಗಳು.
ಕಾವೇರಿ ವನ್ಯಜೀವಿ ಉಪ ಅರಣ್ಯ ರಕ್ಷಣಾಧಿಕಾರಿ ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನ.11. ರ ತಡ ರಾತ್ರಿ ಪುಂಗುಂ ಗಸ್ತಿನ ಅರಣ್ಯ ರಕ್ಷಕ ಚಂದ್ರಶೇಖರ್ ಕುಂಬಾರ್ ಹಾಗೂ ಗುಂಡಪಟ್ಟಿ ಕಳ್ಳಬೇಟೆ ತಡೆ ಶಿಬಿರದ ಕಾವಲುಗಾರರು ಗಸ್ತು ಮಾಡುವಾಗ ಮೇಟುಗಲು ಅರಣ್ಯ ಪ್ರದೇಶದಲ್ಲಿ 3 ಜನ ಬಂದೂಕುನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಬೇಟೆ ಮಾಡಲು ಹೊಂಚು ಹಾಕುತ್ತಿರುವಾಗ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
ಈ ವೇಳೆ ವ್ಯಕ್ತಿಗಳ ಸಹಿತ 2 ಮೂತಿ ಲೋಡ್ ಬಂದೂಕುಗಳು, 1 ಹೋಂಡಾ ಶೈನ್ ಬೈಕ್, ಹೆಡ್ ಬ್ಯಾಟರಿ, 2 ಚಾಕು ಹಾಗೂ ಮದ್ದುಗುಂಡುಗಳನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.