ಅಕ್ರಮ ಬಾರ್ ತೆರೆಯುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು, ನ.20: ತಾಲೂಕಿನ ನಾಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕೃಷಿ ವಿಶ್ವವಿದ್ಯಾನಿಲಯ (ರೈತ ತರಬೇತಿ ಕೇಂದ್ರ)ಪಕ್ಕದಲ್ಲಿ ಬಾರ್ ಅನ್ನು ಅಕ್ರಮವಾಗಿ ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ(ರಿ) ರೈತ ಬಣ ವತಿಯಿಂದ ಪ್ರತಿಭಟನೆ ನಡೆಯಿತು.
ಕುವೆಂಪುನಗರ ಅನಿಕೇತನ ರಸ್ತೆಯಲ್ಲಿರುವ ಅಬಕಾರಿ ಆಯುಕ್ತರ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ತಾಲೂಕಿನ ನಾಗನಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿರುವ ಕೃಷಿ ವಿವಿಯಲ್ಲಿ ಪ್ರತಿದಿನ ಕೇಂದ್ರಕ್ಕೆ ರೈತರು ರಾಜ್ಯ ಮತ್ತು ಅಂತರ್ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ತರಬೇತಿ ಪಡೆಯುತ್ತಿದ್ದಾರೆ. ಈ ಕೃಷಿ ವಿವಿ ಎದುರು ಬಾರ್ ನ್ನು ತೆರೆಯಲು ಮುಂದಾಗಿರುವುದು ತಿಳಿದು ಬಂದಿದ್ದು ಈ ಸ್ಥಳದಲ್ಲಿ ಬಾರ್ ನ್ನು ನಿರ್ಮಿಸಲು ಬೇಕಾಗಿರುವ ಕಟ್ಟಡವನ್ನು ಅಕ್ರಮವಾಗಿ ಪೂರ್ಣಗೊಳಿಸಿದ್ದಾರೆ. ಈ ವಿಷಯವು ಕಾನೂನು ಬಾಹಿರವಾಗಿದ್ದು ಈ ಒಂದು ವಿಚಾರವನ್ನು ಕಾನೂನನ್ನು ಗಾಳಿಗೆ ತೂರಿ ಬಾರ್ ತೆರೆಯಲು ಮುಂದಾಗಿರುವುದು ವಿಷಾದನೀಯ. ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು, ಮೈಸೂರು ತಾಲೂಕು ಆಡಳಿತಾಧಿಕಾರಿಗಳು ಹಾಗೂ ಪಿಡಿಒ ಅಬಕಾರಿ ಆಯುಕ್ತರು ಎಲ್ಲರ ಗಮನಕ್ಕೂ ತಂದಿದ್ದೇವೆ. ಇದನ್ನು ಹೊರತುಪಡಿಸಿ ಕೆಲವು ಕಾಣದ ಕೈಗಳು ಲಂಚದ ಆಮಿಷಕ್ಕೆ ಕೈಯೊಡ್ಡಿರುವ ರಾಜಕಾರಣಿಗಳ ಕೈವಾಡವು ಪ್ರಮುಖವಾಗಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಈ ಒಂದು ಸ್ಥಳದಲ್ಲಿ ವಿಶ್ವವಿಖ್ಯಾತವಾಗಿರುವ ಸೃಷ್ಠಿ ನಾಗನಹಳ್ಳಿ ದೇವಸ್ಥಾನವಿದ್ದು ವಿಶ್ವವಿಖ್ಯಾತ ರೈತ ತರಬೇತಿ ಕೇಂದ್ರವಿದೆ. ಇಲ್ಲಿ ಬಾರ್ ನ್ನು ನಿರ್ಮಿಸಲು ಮುಂದಾಗಿರುವುದು ಅಕ್ಷಮ್ಯ. ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅವರು ಕ್ರಮ ಕೈಗೊಳ್ಳುತ್ತಿಲ್ಲ. ಮೈಸೂರು ಜಿಲ್ಲಾ ಅಬಕಾರಿ ಆಯುಕ್ತರೂ ಕೂಡ ಶಾಮೀಲಾಗಿ ರೈತರುಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಬಾರ್ ಮಾಲೀಕರು ರಾಜಕೀಯವಾಗಿ ಬಲಿಷ್ಠರಾಗಿದ್ದು ಸರ್ಕಾರ ಕೂಡ ಅವರಿಗೆ ಬೆಂಬಲ ನೀಡುತ್ತಿದೆ. ಕೃಷಿ ವಿವಿ 15 ಅಡಿ ಅಂತರದಲ್ಲಿ 6 ಅಂತಸ್ತಿನ ಕಟ್ಟಡವನ್ನು ಸರ್ಕಾರದ ಆದೇಶ ಗಾಳಿಗೆ ತೂರಿ ಕಟ್ಟಲಾಗಿದೆ. ಪ್ರಶ್ನಿಸಿದರೆ 10 ಲಕ್ಷ ರೂ ಕೊಟ್ಟು ಬಂದಿದ್ದೇವೆ. ಅದನ್ನು ಹೇಗೆ ರಿಕವರಿ ಮಾಡಲಿ ಎಂದು ಪಿಡಿಒ ಉಡಾಫೆಯ ಮಾತಾಡುತ್ತಾರೆ. ಅಧಿಕಾರಿಗಳು ಬಾರ್ ಮಾಲೀಕರ ಜೊತೆ ಶಾಮೀಲಾದರೆ ರೈತರ ಗತಿ ಏನಾಗಬಹುದು? ರೈತರು ಕುಳಿತುಕೊಳ್ಳುವ ಸ್ಥಳದಲ್ಲಿ ಬಾರ್ ಆದಲ್ಲಿ ರೈತರು ಕುಡಿತದ ಚಟಕ್ಕೆ ಬೀಳುತ್ತಾರೆ. ನ್ಯಾಯ ದೊರಕಿಸಿಕೊಡಿ ಎಂದು ಒತ್ತಾಯಿಸಿದರು.
ಇದೇ ವೇಳೆ ಅಬಕಾರಿ ಆಯುಕ್ತರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಇ.ಎನ್ ಕೃಷ್ಣ, ವರಿಷ್ಠ ಹೆಚ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಎಂ.ಮಂಜು, ಕಾರ್ಯದರ್ಶಿ ಹೆಚ್.ನಾರಾಯಣ್, ಆಟೋ ಚಾಲಕರ ಸಂಘ, ದಿನಗೂಲಿ ನೌಕರರು, ಪರಿಸರ ಪ್ರೇಮಿಗಳು, ಸ್ಥಳೀಯ ಸ್ತ್ರೀಶಕ್ತಿ ಸಂಘದವರು, ರೈತರು, ಪೌರಕಾರ್ಮಿಕರು, ದೇವರಾಜ ಅರಸು ವೇದಿಕೆ, ಡಿಎಸ್ ಎಸ್ ಸಂಘ, ಕೂಲಿಕಾರ್ಮಿಕ ಸಂಘ, ಮಡಿವಾಳ ಸಂಘದವರು ಪಾಲ್ಗೊಂಡಿದ್ದರು.