ಅಕ್ರಮ ಬಂಧನ, ಹಲ್ಲೆ: ಪಿಎಸ್‍ಐ ಅಮಾನತಿಗೆ ಒತ್ತಾಯ

ಕಲಬುರಗಿ:ಡಿ.27: ಶ್ರೀರಾಮಸೇನೆಯ ಕಾರ್ಯಕರ್ತರೊಬ್ಬರನ್ನು ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿರಿಸಿ ಅಮಾನವೀಯವಾಗಿ ಥಳಿಸಿದ ಜೇವರ್ಗಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿ.2ರಂದು ಆಂದೋಲಾ ಗ್ರಾಮದ ಕರುಣೇಶ್ವರ ಮಠದ ರಥೋತ್ಸವಕ್ಕೂ ಮುಂಚೆ ಸಣ್ಣ ಜಗಳ ನಡೆದಿದ್ದನ್ನು ನೆಪ ಮಾಡಿಕೊಂಡು ಶ್ರೀರಾಮಸೇನೆ ಕಾರ್ಯಕರ್ತ ರಮೇಶ್ ಬಾಲಪ್ಪ ದರ್ಶನಾಪುರ ಎಂಬಾತನನ್ನು ಬಂಧಿಸಿ, ಅಕ್ರಮವಾಗಿ ಡಿ.4ರವರೆಗೆ ಜೇವರ್ಗಿ ಠಾಣೆಯಲ್ಲಿ ಕೂಡಿ ಹಾಕಲಾಗಿದೆ. ಈ ವೇಳೆ ಆ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಆಂದೋಲಾ ಕರುಣೇಶ್ವರ ಮಠದ ಆವರಣದಲ್ಲಿರುವ ನಾಮಫಲಕದ ಮೇಲೆ ಸೆಗಣಿ ಎರಚಿದ್ದು ತಾನೇ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಇಷ್ಟಕ್ಕೂ ಠಾಣೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.
ಡಿ.2ರಂದು ಅಕ್ರಮವಾಗಿ ಬಂಧನಕ್ಕೆ ಒಳಪಡಿಸಿದ ಬಳಿಕ ಜೇವರ್ಗಿ ತಹಸೀಲ್ದಾರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಕಟ್ಟಿಸಂಗಾವಿ ಬಳಿ ನಡೆದ ಗದ್ದಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಅವರನ್ನು ಬಂಧಿಸಲಾಗಿದೆ ಎಂದು ವಿವರಿಸಲಾಗಿದೆ. ಆದರೆ, ರಮೇಶ್ ಅವರನ್ನು ಆಂದೋಲಾ ಗ್ರಾಮದಲ್ಲಿ ಬಂಧಿಸಿರುವ ಕುರಿತು ಠಾಣೆಯ ಪೇದೆಗಳಾದ ಯಲ್ಲಾಲಿಂಗ ಮತ್ತು ಸಿದ್ರಾಮ ಅವರು ಪಿಎಸ್‍ಐಗೆ ಸಲ್ಲಿಸಿರುವ ದೂರಿನಲ್ಲಿ ದಾಖಲಿಸಿದ್ದಾರೆ. ಮತ್ತೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.20, 2022ರಂದು ತಾಲೂಕು ಪಂಚಾಯಿತಿಗೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಂತಿಮ ವರದಿ ಸಲ್ಲಿಸಿರುವುದಾಗಿ ದಾಖಲಿಸಲಾಗಿದೆ. ಅರೆಸ್ಟ್ ಮಾಡುವುದಕ್ಕಿಂತಲೂ ಮುಂಚಿನ ಒಂದು ವರ್ಷದ ಹಿಂದೆಯೇ ತನಿಖೆ ಪೂರ್ಣಗೊಂಡಿದೆ ಎಂದರೆ ಏನರ್ಥ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿ ಭಯದ ವಾತಾವರಣ ಸೃಷ್ಟಿಸುವ ಕೆಲಸವನ್ನು ಜೇವರ್ಗಿ ಪೊಲೀಸರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಜೇವರ್ಗಿ ಸಿಪಿಐ ಅವರಿಗೆ ಡಿ.7ರಂದು ದೂರು ಸಲ್ಲಿಸಲಾಗಿದೆ. ಆದರೂ ಈವರೆಗೆ ನೀಡಿರುವ ದೂರಿಗೆ ಹಿಂಬರಹ ನೀಡಲು ಸಿಪಿಐ ಸಿದ್ದರಿಲ್ಲ. ಜೊತೆಗೆ, ಅವರನ್ನು ಸಂಪರ್ಕಿಸಲು ಯತ್ನಿಸಿದರೆ ಫೋನ್ ಕರೆ ಸ್ವೀಕರಿಸುತ್ತಿಲ್ಲ. ದುರಂತವೆಂದರೆ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಫೇಸ್‍ಬುಕ್ ಖಾತೆಯಲ್ಲಿ ಲೈಕ್ ಒತ್ತುವುದರಲ್ಲಿ ಸಿಪಿಐ ಮಗ್ನರಾಗಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಜೇವರ್ಗಿ ಪಿಎಸ್‍ಐ ನಡೆಸಿರುವ ಅಕ್ರಮ ಬಂಧನ ಮತ್ತು ಹಲ್ಲೆ ಪ್ರಕರಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಹೇಶ್ ಗೊಬ್ಬೂರ್, ಮಹೇಶ್ ಯಾದವ್, ಅಂಬಾರಾಯ ಕಂಬಾರ, ಶರಣು ಗುತ್ತೇದಾರ್, ವೀರೇಶ್ ಸುತಾರ್, ಪರಮೇಶ್ವರ ಮುಲಗೆ ಸೇರಿದಂತೆ ಇತರರಿದ್ದರು.

ಗ್ರಾಪಂ. ಅವ್ಯವಹಾರ: ನಾಳೆ ಪ್ರತಿಭಟನೆ
ಜೇವರ್ಗಿ ತಾಲೂಕಿನ ಯಾಳವಾರ, ಆಲೂರು, ಆಂದೋಲಾ ಮತ್ತು ಸಾತಖೇಡ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರಗಳ ತನಿಖೆಗೆ ಒತ್ತಾಯಿಸಿ ಡಿ.28ರಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿದ್ಧಲಿಂಗ ಮಹಾಸ್ವಾಮೀಜಿ ಮಾಹಿತಿ ನೀಡಿದರು.