ಅಕ್ರಮ ಪ್ಲಾಸ್ಟಿಕ್ ಕಾರ್ಖಾನೆ ಮೇಲೆ ದಾಳಿ: 10 ಟನ್ ಕಚ್ಚಾ ಪ್ಲಾಸ್ಟಿಕ್ ವಶಕ್ಕೆ

ಕಲಬುರಗಿ.ನ.11: ಅಕ್ರಮವಾಗಿ ಪ್ಲಾಸ್ಟಿಕ್ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಘಟನೆ ನಗರದ ಹೊರವಲಯದ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿ ವರದಿಯಾಗಿದೆ.
ಕಳೆದ ಮಂಗಳವಾರ ರಾತ್ರಿ ವೇಳೆ ಅಕ್ರಮ ಪ್ಲಾಸ್ಟಿಕ್ ಕಾರ್ಖಾನೆ ಮೇಲೆ ಮಹಾನಗರ ಪಾಲಿಕೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಹತ್ತು ಟನ್ ಕಚ್ಚಾ ಪ್ಲಾಸ್ಟಿಕ್‍ನ್ನು ವಶಕ್ಕೆ ಪಡೆದರು
ನಗರದ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಪ್ಲಾಸ್ಟಿಕ್ ತಯಾರಿಸಲಾಗುತ್ತಿದೆ ಎಂಬ ಖಚಿತ ಭಾತ್ಮಿ ಮೇರೆಗೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರ ನೇತೃತ್ವದ ತಂಡವು ತಡರಾತ್ರಿ ಕಾರ್ಯಾಚರಣೆ ಮಾಡಿದೆ. ಈ ವೇಳೆ ಕಾರ್ಖಾನೆಯಲ್ಲಿ ಹತ್ತು ಟನ್ ಕಚ್ಚಾ ಸಾಮಗ್ರಿಗಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡರಲ್ಲದೇ ಕಾರ್ಖಾನೆಯನ್ನು ಸೀಜ್ ಮಾಡಿದರು.
ಕೇವಲ ಕಾರ್ಖಾನೆ ಮಾತ್ರವಲ್ಲದೇ ಮನೆಯಲ್ಲಿಯೂ ಟನ್ ಲೆಕ್ಕದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿಟ್ಟಿರುವುದು ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಹೈದ್ರಾಬಾದ್‍ನಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ನೀರಿನ ಗ್ಲಾಸ್, ಚಹಾ ಗ್ಲಾಸ್ ಮುಂತಾದ ಶೇಕಡಾ 75ರಷ್ಟು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.