ಅಕ್ರಮ ನೇಮಕ: ಮತ್ತೋರ್ವ ಶಿಕ್ಷಕನ ಬಂಧನ

ವಿಜಯಪುರ,ಸೆ.21-ಅಕ್ರಮವಾಗಿ ನೇಮಕಾತಿ ಹೊಂದಿದ್ದ ಮತ್ತೋರ್ವ ಶಿಕ್ಷಕನನ್ನು ಸಿಓಡಿ ಅಧಿಕಾರಿಗಳು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲಾ ಮೂಲದ ಅಶೋಕ ಚವ್ಹಾಣ್ ಬಂಧಿತ ಶಿಕ್ಷಕ.
ಅಶೋಕ ಚವ್ಹಾಣ್ ಅವರು ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು.
ಸೂಕ್ತ ಮಾಹಿತಿ ಕಲೆ ಹಾಕಿ ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿರೋ ಸಿಓಡಿ ಅಧಿಕಾರಿಗಳು ಅಶೋಕ ಚವ್ಹಾಣ್ ಅವರನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಮೊದಲು ಸೇವೆ ಸಲ್ಲಿಸಿದ್ದ ಶಿಕ್ಷಕ ಅಶೋಕ, ಬಳಿಕ ವಿಜಯಪುರ ಜಿಲ್ಲೆಗೆ ವರ್ಗವಾಗಿ ಬಂದಿದ್ದರು.
ಆ ಮೂಲಕ ಅಕ್ರಮ ಶಿಕ್ಷಕರ ನೇಮಕಾತಿಯಲ್ಲಿ ಬಂಧನವಾದ ಜಿಲ್ಲೆಯ ಮೂರನೇ ಶಿಕ್ಷಕ ಇವರಾಗಿದ್ದಾರೆ.
ಈಗಾಗಲೇ ಜಿಲ್ಲೆಯ ಇಬ್ಬರು ಶಿಕ್ಷಕರ ಬಂಧನವಾಗಿದೆ. ಚಡಚಣ ತಾಲುಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ,
ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಸಿದ್ರಾಮಪ್ಪ ಬಿರಾದಾರ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಇದೀಗ ಅಶೋಕ ಚೌವ್ಹಾಣ್ ಬಂಧನದಿಂದ ಅಕ್ರಮ ನೇಮಕಾತಿಯಲ್ಲಿ ಬಂಧಿತರಾದ ಶಿಕ್ಷಕರ ಸಂಖ್ಯೆ ಮೂರಕ್ಕೇರಿದಂತಾಗಿದೆ.