ಅಕ್ರಮ ನೇಮಕಾತಿ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟಣೆ

ತಿ.ನರಸೀಪುರ : ನ.9- ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಹಾಗೂ ಸೈನಿಕ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಯಿಂದ ಹೊರಗುತ್ತಿಗೆ ಮೂಲಕ ಅಕ್ರಮವಾಗಿ ನಡೆದಿರುವ ನೌಕರರ ನೇಮಕಾತಿ ರದ್ದುಗೊಳಿಸಿ, ವಿದ್ಯಾರ್ಹತೆ ಮತ್ತು ಮೀಸಲಾತಿ ಅನ್ವಯ ನೌಕರರನ್ನು ನೇಮಕ ಮಾಡುವಂತೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘದ ಸಹಭಾಗಿತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ಕೆಎಸ್‍ಐಸಿ ಯ ಕಾರ್ಖಾನೆಯ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಜೋಡಿ ರಸ್ತೆಯಲ್ಲಿನ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಕಾರ್ಖಾನೆ ಮುಂಭಾಗ ಕಾರ್ಮಿಕ ಮುಖಂಡರು, ರೈತ ಸಂಘಟನೆಗಳ ಹಾಗೂ ದಸಂಸ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣದ ನೆಪದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ನೇಮಕಾತಿ ಕೂಡಲೇ ರದ್ದಾಗಬೇಕು. ಜಿಲ್ಲಾಧಿಕಾರಿಯವರು ಕಾರ್ಖಾನೆಗಳ ನೌಕರರ ನೇಮಕಾತಿಯಲ್ಲಿನ ಅಕ್ರಮದ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡುತನಕ ಪ್ರತಿಭಟನೆಯನ್ನು ಹಿಂಪಡೆಯಲ್ಲ ಎಂದು ಪಟ್ಟುಹಿಡಿದರು.
ಕೆಎಸ್‍ಐಸಿ ಯ ಪ್ರಧಾನ ಸ್ಥಾಪಕ ಸತೀಶ್ ಕುಮಾರ್ ಹಾಗೂ ಕಾರ್ಮಿಕ ನಿರೀಕ್ಷಕ ಗಂಗಾಧರ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಿ.ನಾಗೇಶ್ ಅವರು ಧರಣಿ ನಿರತರ ಅಹವಾಲು ಆಲಿಸಿ ಕೆಎಸ್‍ಐಸಿ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೌಕರರ ನೇಮಕ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಮೀಸಲಾತಿ ಅನ್ವಯ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ, ಹೊರಗುತ್ತಿಗೆ ನೌಕರರ ಭವಿಷ್ಯಕ್ಕೆ ಮಾರಕವಾಗಿದೆ. ರೇಷ್ಮೆ ಉದ್ಯಮಗಳ ನಿಗಮದ ವಿವಿಧ ಕಾರ್ಖಾನೆಗಳಿಗೆ ಇಲ್ಲಿಯವರೆಗೂ ಹೊರಗುತ್ತಿಗೆ ಮೂಲಕ ಮಾಡಿಕೊಂಡ ನೇಮಕಾತಿ ರದ್ದುಗೊಳಿಸಬೇಕು. ನಿಗಮದಿಂದಲೇ ಮೀಸಲಾತಿ ಅನ್ವಯ ನೇರ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸಬೇಕು. ತಪ್ಪಿದಲ್ಲಿ ಹೋರಾಟದ ಎಚ್ಚರಿಕೆ ನೀಡಿದರು
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಈ. ರಾಜು, ರಂಗರಾಜಪುರ ಚಿನ್ನಸ್ವಾಮಿ, ರಾಜು, ಜಿಲ್ಲಾ ಸಂಚಾಲಕ ಯಡದೊರೆ ಮಹದೇವಯ್ಯ, ತಾಲೂಕು ಸಂಚಾಲಕ ಕುಕ್ಕೂರು ರಾಜು, ಎಂ. ಸಿದ್ದರಾಜು, ಐ ಎನ್ ಟಿ ಯು ಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಅನಿಲ್ ಕುಮಾರ್, ಎನ್.ಶಿವಪ್ರಕಾಶ್, ಹೆಚ್.ಡಿ. ರಾಜೇಶ್, ಮಲ್ಲೇಶ್ ಕುಮಾರಸ್ವಾಮಿ, ಪುಟ್ಟರಾಜು, ರಾಜು, ರಾಜಪ್ಪ, ಮಹೇಶ ಮಹದೇವಸ್ವಾಮಿ, ಮಹದೇವ, ರಂಗಸಮುದ್ರ ನಂಜುಂಡ, ಮನೋಜ್ ಕುಮಾರ್, ಇಂಡವಾಳು ಹೊನ್ನಯ್ಯ ಕುಮಾರ, ಜಗದೀಶ, ಆನಂದ ನಾಯಕ, ನಾಗೇಶ, ಮಹದೇವಸ್ವಾಮಿ, ಶಿವು, ರಮೇಶ, ಶಂಕರಪುರ ಮಹಾದೇವಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು