ಅಕ್ರಮ ನಾಡಕೋವಿ ಮಾರಾಟ: ೪ ಆರೋಪಿಗಳಿಗೆ ಜಾಮೀನು


ಸುಳ್ಯ, ಜೂ.೧೦- ಅಕ್ರಮ ನಾಡಕೋವಿ ತಯಾರಿಸಿ ಮಾರಾಟ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ೪ ಆರೋಪಿಗಳಿಗೆ ಪುತ್ತೂರು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಆರೋಪಿಗಳಾದ ಗುತ್ತಿಗಾರಿನ ದಿವಾಕರ ಆಚಾರ್ಯ, ಬಿಳಿನೆಲೆಯ ಅಶೋಕ, ಹಾಸನದ ಚಂದನ್, ಸುಬ್ರಹ್ಮಣ್ಯದ ಕಾರ್ತಿಕ್ ಹಾಗೂ ಪಾಲ್ತಾಡ್ನಿ ಲೋಹಿತ್ ಬಂಗೇರ ಎಂಬವರನ್ನು ಸುಳ್ಯ ಸರ್ಕಲ್ ಇನ್ಸ್ಪೆ?ಕ್ಟರ್ ನೇತೃತ್ವದಲ್ಲಿ ವಶಕ್ಕೆ ತೆಗೆದುಕೊಂಡು ಆರೋಪಿಗಳ ಪೈಕಿ ೧ನೇ ಆರೋಪಿ ದಿವಾಕರ ಆಚಾರ್ಯರನ್ನು ವಿಚಾರಿಸಿದಾಗ ತನ್ನ ಕಬ್ಬಿಣದ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಾಡ ಕೋವಿಯನ್ನು ತಯಾರಿಸುತ್ತಿದ್ದೇನೆಂದು ಮತ್ತು ಹಾಗೆ ತಯಾರಿಸಿದ ಕೋವಿಗಳ ಪೈಕಿ ಒಂದನ್ನು ಹಾಸನದ ಚಂದನ್ಗೆದ ಮಾರಾಟ ಮಾಡಿದ್ಧೇನೆಂದು, ಇನ್ನೊಂದನ್ನು ಕೊಳ್ತಿಗೆ ಗ್ರಾಮದ ಪಾಲ್ತಾಡು ಲೋಹಿತ್ಗೆ ನೀಡಿದ್ದೇನೆಂದು ತಪ್ಪೊಪ್ಪಿಗೆ ನೀಡಿದ್ದು, ಆ ಪ್ರಕಾರ ತನಿಖೆ ನಡೆಸಿದಾಗ ಆರೋಪಿಗಳ ಸ್ವಾಧೀನದಲ್ಲಿದ್ದ ಅಕ್ರಮ ಕೋವಿಗಳನ್ನು ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರೆನ್ನಲಾದ ಆರೋಪದಡಿ ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಸುಳ್ಯ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೂ ೧೪ ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಇದೀಗ ಪುತ್ತೂರು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರೊಡಾಲ್ಫ್ ಪಿರೇರಾರವರು ಆರೋಪಿಗಳಾದ ಅಶೋಕ, ಚಂದನ್, ಕಾರ್ತಿಕ್ ಹಾಗೂ ರೋಹಿತ್ ಬಂಗೇರರವರಿಗೆ ತಲಾ ರೂ. ೫೦,೦೦೦ಕ್ಕೆ ಬಾಂಡ್ ಹಾಗೂ ಅಷ್ಟೇ ಮೊತ್ತದ ಜಾಮೀನು ನೀಡುವ ಶರ್ತದ ಮೇರೆಗೆ ಅವರ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಮಂಗಳವಾರ ಆದೇಶ ನೀಡಿದ್ದಾರೆ. ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಎಂ. ವೆಂಕಪ್ಪ ಗೌಡ, ಚಂಪಾ ವಿ.ಗೌಡ ಹಾಗೂ ರಾಜೇಶ್ ಬಿ.ಜಿ.ಯವರು ವಾದಿಸಿದ್ದಾರೆ.