ಅಕ್ರಮ ತಡೆಗೆ ಆಯೋಗದ ಹದ್ದಿನ ಕಣ್ಣು

ಬೆಂಗಳೂರು,ಮಾ.೨೯:ರಾಜ್ಯ ವಿಧಾನಸಭೆಗೆ ಮೇ ೧೦ ರಂದು ಚುನಾವಣೆ ನಡೆಸುವುದಾಗಿ ಪ್ರಕಟಿಸಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಮುಕ್ತ ನ್ಯಾಯಸಮ್ಮತ ಹಾಗೂ ನಿರ್ಭೀತ ಚುನಾವಣೆ ನಡೆಸಲು ಆಯೋಗ ಬದ್ಧವಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ವಹಿಸಲಾಗಿದ್ದು, ಹಣ ಸಾಗಾಟ ಸೇರಿದಂತೆ ಎಲ್ಲದರ ಮೇಲೆಯೂ ಹದ್ದಿನ ಕಣ್ಣಿಡಲಾಗುವುದು ಎಂದರು.ರಾಜ್ಯದ ವಿವಿಧೆಡೆ ೧೭೧ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ಪರಿಶೀಲನೆ ನಡೆಸಲಾಗುವುದು, ಹಣ ಸಾಗಾಟಕ್ಕೆ ಅವಕಾಶವಾಗದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಇದಲ್ಲದೆ ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಲು ೨೦೧೬ ಸಂಚಾರಿ ದಳವನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ಇಡಲು ೨,೪೦೦ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮತಗಟ್ಟೆ ವಿವರ
ಮತದಾನಕ್ಕಾಗಿ ರಾಜ್ಯದಲ್ಲಿ ಒಟ್ಟು ೫೨,೨೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನಗರ ಪ್ರದೇಶದಲ್ಲಿ ೨೪,೦೬೩ ಮತಗಟ್ಟೆಗಳು, ಗ್ರಾಮೀಣ ಭಾಗದಲ್ಲಿ ೩೪,೨೧೯ ಮತಗಟ್ಟೆಗಳು ಬರಲಿವೆ. ಒಂದೊಂದು ಮತಗಟ್ಟೆಯಲ್ಲಿ ೮೮೩ ಮತದಾರರು ಮತ ಚಲಾಯಿಸಬಹುದು.
ಮತದಾರರ ಮಾಹಿತಿ
ರಾಜ್ಯದಲ್ಲಿ ಮಹಿಳೆಯರೇ ನಿರ್ವಹಿಸುವ ೧,೩೨೦ ಮತಗಟ್ಟೆಗಳು ಹಾಗು ಯುವಕರಿಗಾಗಿ ೨೨೪ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು ೫.೨೨ ಕೋಟಿ ಮತದಾರರಿದ್ದು, ೨,೬೨,೪೨,೫೬೧ ಪುರುಷ ಮತದಾರರು, ೨,೫೯,೨೬,೩೧೯ ಮಹಿಳಾ ಮತದಾರರಿದ್ದಾರೆ. ಇದರಲ್ಲಿ ೯,೧೭,೨೪೧ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.೮೦ ವರ್ಷ ಮೇಲ್ಪಟ್ಟ ೧೨,೧೫,೭೬೩ ಮತದಾರರು, ದಿವ್ಯಾಂಗರು ೫,೫೫,೦೭೩ ಮತದಾರರಿದ್ದು, ೪,೬೯೯ ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದರು.
ಅಭ್ಯರ್ಥಿಗಳ ಮಾಹಿತಿ
ಮತದಾರರಿಗೆ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ತಿಳಿಯುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದ್ದು, ಅಭ್ಯರ್ಥಿಯ ಚುನಾವಣಾ ಅಫಿಡೆವಿಟ್ ಆಯೋಗದ ವೆಬ್‌ಸೈಟ್‌ನಲ್ಲಿ ಇರಲಿದೆ. ಇದರಲ್ಲಿ ಅಭ್ಯರ್ಥಿಯ ಎಲ್ಲ ವಿವರಗಳು ಇರುತ್ತವೆ, ಮತದಾರರು ವೆಬ್‌ಸೈಟ್ ಮೂಲಕ ಮತದಾರರ ಮಾಹಿತಿ ತಿಳಿದುಕೊಳ್ಳಬಹುದಾಗಿದೆ ಎಂದರು.
ಚುನಾವಣಾ ಅಕ್ರಮದ ಬಗ್ಗೆ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ. ಈ ದೂರನ್ನು ಆಯೋಗ ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.