ಬೀದರ. ಜೂ.23: ಜೂನ್ 29 ರಂದು ಆಚರಿಸಲ್ಪಡುವ ಬಕ್ರೀದ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಜಾನುವಾರುಗಳ ಸಾಗಾಣಿಕೆಯನ್ನು ಅಲ್ಲದೇ ಒಂಟೆಗಳ ವಧೆ ಮತ್ತು ಸಾಗಾಣಿಕೆಯನ್ನು ಸಹ ತಡೆಗಟ್ಟಲು ಸಂಬಂದಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದರ ಜೋತೆಗೆ ಅವುಗಳ ಮೇಲೆ ನೀಗಾವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು. ಅವರು ಗುರವಾರ ಬೀದರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಬಕ್ರೀದ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಲಿಸ್ ಇಲಾಖೆ ಹಾಗೂ ಪಶು ಪಾ¯ನಾ ಇಲಾಖೆಯಿಂದ ಔರಾದ ತಾಲ್ಲೂಕಿನ ವನಮಾರಪಳ್ಳಿ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಚೆಕ್ ಪೋಸ್ಟ್ ತೆರೆದು ಅಧಿಕಾರಿಳನ್ನು ನೇಮಿಸಬೇಕು. ಜಾನುವಾರು ಸಾಗಾಣಿಕೆಯನ್ನು ಮಾಡುವಾಗ, ವಾಹನದ ಜೊತೆಗೆ ಜಾನುವಾರುಗಳ ಮಾಲೀಕರ ವಿಳಾಸ, ಎಲ್ಲಿಗೆ ಸಾಗಾಣಿಕೆ ಮಾಡಲಾಗುವುದು ಎಂಬುದರ ವಿವರ ಪಶುವೈದ್ಯರಿಂದ ಪಡೆದ ದೃಢೀಕರಣ ಪ್ರಮಾಣ ಪತ್ರಗಳನ್ನು ಸಾರ್ವಜನಿಕರು ಹೊಂದಿರಬೇಕು ಹಾಗೂ ವಾಹನದಲ್ಲಿ 100 ಕೆ.ಜಿ. ಕೆಳಗಿನ ಜಾನುವಾರುಗಳಿಗೆ 1×1.5 ಚ.ಮೀ. ಮತ್ತು 100 ಕೆ.ಜಿ. ಮೇಲಿನ ಜಾನುವಾರುಗಳಿಗೆ 1 x 2 ಚ.ಮೀ. ಸ್ಥಳಾವಕಾಶ ಒದಗಿಸಿ ಕೊಡಬೇಕು ,ಇಲ್ಲವಾದಲ್ಲಿ ಪ್ರಾಣಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ರನ್ವಯ ಹಸು, ಕರು, ಎತ್ತು ಇವುಗಳನ್ನು ಒಟ್ಟಾರೆ ವಧೆ ಮಾಡುವಂತಿಲ್ಲ. 13 ವರ್ಷಗಳ ಎಮ್ಮೆ, ಕೋಣಗಳನ್ನು ಪಶುವೈದ್ಯಾಧಿಕಾರಿಗಳ ದೃಢೀಕರಣದೊಂದಿಗೆ ಮಾತ್ರ ವಧೆ ಮಾಡಬಹುದಾಗಿದೆ. ತಪ್ಪಿದಲ್ಲಿ ಮೊದಲ ಅಪರಾದಕ್ಕೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಇಲ್ಲವೇ 3 ವರ್ಷದಿಂದ 7 ವರ್ಷಗಳ ಜೈಲು ಶಿಕ್ಷೆ ಹಾಗೂ 2ನೇ ಬಾರಿಯ ಅಫರಾದಕ್ಕೆ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ಇಲ್ಲವೇ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಾಂತಿಯುತವಾಗಿ ಬಕ್ರೀದ ಹಬ್ಬ ಆಚರಣೆ ನಿಮಿತ್ಯ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಬೇಕು. ಬಕ್ರೀದ್ ಹಬ್ಬದ ದಿನದಂದು ಉಂಟಾಗುವ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಹಾಗೂ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲನೆ ಮಾಡುವ ಮೂಲಕ ಈ ಬಕ್ರೀದ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ನಗರಸಭೆ ಆಯುಕ್ತ ಶಿವರಾಜ ರಾಠೋಡ, ಬೀದರ ಪೋಲಿಸ್ ಉಪಾಧೀಕ್ಷಕ ಕೆ.ಎಂ ಸತೀಶ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.