ಅಕ್ರಮ ಚಿನ್ನ ಸಾಗಾಟ ಪ್ರಕರಣ: ಮೂವರ ಸೆರೆ


ಮಂಗಳೂರು, ಎ.೫- ದುಬೈ ಮತ್ತು ಶಾರ್ಜಾದಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು ಪ್ರಕರಣವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಸುಮಾರು ೧.೧೮ ಕೋ.ರೂ. ಮೌಲ್ಯದ ಚಿನ್ನ ವಶಪಡಿಸಿ ಮೂವರನ್ನು ಬಂಧಿಸಿದ್ದಾರೆ.
ಉಳ್ಳಾಲ ನಿವಾಸಿ ಮುಹಮ್ಮದ್ ಆಸಿಫ್, ಮಣ್ಣಿಪ್ಪುರಂ ನಿವಾಸಿ ಮುಹಮ್ಮದ್ ಅಶ್ರಫ್, ಕಾಸರಗೋಡು ನಿವಾಸಿ ಅಬ್ದುಲ್ ಸಲಾಂ ಬಂಧಿತ ಆರೋಪಿಗಳು. ಎ.೧ರಂದು ಅಬ್ದುಲ್ ಸಲಾಂ ಎಂಬಾತ ಏರ್ ಇಂಡಿಗೋ ವಿಮಾನ ಮೂಲಕ ಶಾರ್ಜಾದಿಂದ ಮಂಗಳೂರಿಗೆ ಆಗಮಿಸಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಈತ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಎ.೨ರಂದು ಮುಹಮ್ಮದ್ ಅಶ್ರಫ್ ಎಂಬಾತ ಏರ್ ಇಂಡಿಯಾ ವಿಮಾನ ಮೂಲಕ ದುಬೈಯಿಂದ ಮಂಗಳೂರು ಆಗಮಿಸಿದ್ದ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಇಬ್ಬರೂ ಆರೋಪಿಗಳು ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಎಡರೂ ಪ್ರಕರಣದಲ್ಲಿ ೫೭೬ ಗ್ರಾಂನ ೨೬,೪೩,೮೪೦ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಎ.೩ರಂದು ಮುಹಮ್ಮದ್ ಆಸಿಫ್ ಎಂಬಾತ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಒಳ ಉಡುಪು, ಜೀನ್ಸ್ ಪ್ಯಾಂಟ್ ಮತ್ತು ಮೊಣಕಾಲು ಬ್ಯಾಂಡ್ ಮೂಲಕ ಪೇಸ್ಟ್ ರೂಪದಲ್ಲಿ ೧.೯೯೩ ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಚಿನ್ನದ ಮೌಲ್ಯ ೯೨,೨೭,೫೯೦ ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಸ್ಟಮ್ಸ್ ಉಪ ಆಯುಕ್ತರಾದ ಅವಿನಾಶ್ ಕಿರಣ್ ರೊಂಗಾಲಿ, ಪ್ರವೀಣ್ ಖಾಂದಿ, ಅಧೀಕ್ಷಕ ಶ್ರೀಕಾಂತ್, ಸತೀಶ್, ರಾಕೇಶ್, ಸಿ.ಎಂ. ಮೀನಾ, ಆಶಿಷ್ ವರ್ಮಾ ಪಾಲ್ಗೊಂಡಿದ್ದರು.