ಅಕ್ರಮ ಗ್ಯಾಸ್ ಫಿಲ್ಲಿಂಗ್ ಕಂಡುಬಂದಲ್ಲಿ ಸೂಕ್ತ ಕ್ರಮ: ಡಿ.ಸಿ

ರಾಯಚೂರು,ಜು.೧೯-
ಜಿಲ್ಲೆಯಲ್ಲಿ ಅಕ್ರಮ ಎಲ್.ಪಿ.ಜಿ ಸಿಲೆಂಡರ್ ಫಿಲ್ಲಿಂಗ್ ಮಾಡುವ ಕುರಿತು ದೂರುಗಳು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಹಾರ ತ್ತು ನಾಗರಿಕ ಸರಬರಾಜು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್.ಪಿ.ಜಿ ಸಿಲೆಂಡರ್‌ಗಳನ್ನು ಅಕ್ರಮವಾಗಿ ಫಿಲ್ಲಿಂಗ್ ಮಾಡುತ್ತಿದ್ದು, ಜನವಸತಿ ಪ್ರದೇಶಗಳಲ್ಲಿ ಎಲ್.ಪಿ.ಜಿ ಗ್ಯಾಸ್ ಸಿಲೆಂಡರ್‌ಗಳನ್ನು ತುಂಬಿ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಅಕ್ರಮವಾಗಿ ಎಲ್.ಪಿ.ಜಿ ಗ್ಯಾಸ್ ಸಿಲೆಂಡರ್‌ಗಳನ್ನು ಮಾರಾಟ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಎಲ್.ಪಿ.ಜಿ ಗ್ಯಾಸ್ ಸಿಲೆಂಡರ್‌ಗಳನ್ನು ಗ್ರಾಹಕರ ಮನೆಗಳಿಗೆ ಉಚಿತವಾಗಿ ಸರಬರಾಜು ಮಾಡಬೇಕು ಆದರೆ ಡೆಲಿವೆರಿ ಶುಲ್ಕಗಳನ್ನು ವಸೂಲಿ ಮಾಡುವ ಕುರಿತು ಗ್ರಾಹಕರಿಂದ ದೂರುಗಳು ಕೇಳಿಬಂದಲ್ಲಿ ದೂರಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರುಗಿಸುವಂತೆ ತಿಳಿಸಿದರು.
ಪೆಟ್ರೋಲ್ ಬಂಕ್‌ಗಳಲ್ಲಿ ಸರಿಯಾದ ರೀತಿಯಲ್ಲಿ ಪೆಟ್ರೋಲ್ ಭರಿಸಲಾಗುತ್ತಿದೆಯೋ ಇಲ್ಲವೋ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಬೇಕು, ಬೆಲೆ ಮತ್ತು ಸಾಂದ್ರತೆಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿರುವ ಬಗ್ಗೆ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಪೆಟ್ರೋಲ್ ಬಂಕ್‌ಗಳು ಮತ್ತು ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ಗಳಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗ್ನಿ ಅವಘಡ ಸಂಭವಿಸಿದಾಗ ಉಪಯೋಗಕ್ಕೆ ಬರುವಂತಹ ಉಪಕರಣಗಳು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒಳಗೊಮಡಿರುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೃಷ್ಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.