ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

ತುಮಕೂರು, ಮಾ. ೨೬- ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಸಿಇಎನ್ ವಿಭಾಗದ ಪೊಲೀಸರು ಬಂಧಿಸಿ, ೧೨ ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕೊರಟಗೆರೆ ತಾಲ್ಲೂಕು ಭೋವಿ ಕಾಲೋನಿ ಗ್ರಾಮದ ಚಿನ್ನ ರಾಮಾಂಜಿ (೩೪) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದಿನಪಲ್ಲಿ ಗ್ರಾಮದ ದೇವಿ ಅಲಿಯಾಸ್ ದೇವಮ್ಮ (೩೪) ಎಂಬುವರೇ ಬಂಧಿತ ಆರೋಪಿಗಳು.
ನಗರದ ಹೊರವಲಯದ ಯಲ್ಲಾಪುರದ ಬಳಿ ಅಕ್ರಮವಾಗಿ ಒಣಗಿದ ಗಾಂಜಾವನ್ನು ಸಾಗಿಸುತ್ತಿದ್ದ ಚಿನ್ನ ರಾಮಾಂಜಿ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿ ಒಂದು ಕೆ.ಜಿ. ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದರು.
ನಂತರ ಬಂಧಿತನನ್ನು ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದಿನಪಲ್ಲಿ ಗ್ರಾಮದ ದೇವಿ ಅಲಿಯಾಸ್ ದೇವಮ್ಮನನ್ನು ಬಂಧಿಸಿ, ಈಕೆಯಿಂದ ೧೧ ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಗಾಂಜಾವನ್ನು ಆರೋಪಿ ದೇವಮ್ಮ ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ನ್ಯೂನಿ ಎಂಬಲ್ಲಿಂದ ತಂದು ರಾಮಾಂಜಿ ಮೂಲಕ ಮಾರಾಟ ಮಾಡಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ ತಿಳಿಸಿದ್ದಾರೆ.
ಆರೋಪಿ ರಾಮಾಂಜಿ ಗಾಂಜಾವನ್ನು ಚಿಲ್ಲರೆಯಾಗಿ ಜನರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವುದನ್ನು ರೂಢಿಸಿಕೊಂಡಿದ್ದನು. ಈತನ ವಿರುದ್ಧ ೨೦೨೦ ರಲ್ಲಿ ಕೋರ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಮತ್ತೆ ಅದೇ ವೃತ್ತಿಯನ್ನು ಮುಂದುವರೆಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಅಡಿಷನಲ್ ಎಸ್ಪಿ ಟಿ.ಜೆ. ಉದೇಶ್, ಡಿವೈಎಸ್ಪಿ ಸೂರ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ವಿ. ಶೇಷಾದ್ರಿ, ಪಿಎಸ್‌ಐಗಳಾದ ಶಮೀನ್ ಮತ್ತು ಕುಮಾರಿ ಹಾಗೂ ಸಿಬ್ಬಂದಿಗಳಾದ ಅಯೂಬ್, ಮಲ್ಲೇಶ್, ರಮೇಶ್, ಶಿವಪ್ರಸಾದ್, ರವಿಕುಮಾರ್ ರೆಡ್ಡಿ ಹಾಗೂ ಮಹಿಳಾ ಪಿ.ಸಿ. ಅಮ್ಮಾಜಮ್ಮರವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ.