ಅಕ್ರಮ ಖಾತೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.06: ಪಟ್ಟಣದ ಸರ್ವೆ ನಂ 233/1 ರ ಅಖಿಲ ಭಾರತ ವೀರಶೈವ ಮಹಾಸಭಾಗೆ ಸೇರಿದ 20 ಗುಂಟೆ ಜಮೀನನ್ನು ಏಕಪಕ್ಷೀಯವಾಗಿ ಅಕ್ರಮ ಅನ್ಯಕ್ರಾಂತ ಖಾತೆ ಮಾಡಿದ ಆರೋಪದ ಮೇರೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್, ಕೆ.ಆರ್.ಪೇಟೆ ತಹಶೀಲ್ದಾರ್ ನಿಸರ್ಗಪ್ರಿಯ, ಶಿರಸ್ತೇದಾರ್ ರವಿ, ಎ.ಡಿ.ಎಲ್.ಆರ್. ಸಿದ್ದಯ್ಯ, ಕಸಬಾ ಆರ್.ಐ. ಜ್ಞಾನೇಶ್, ಕಸಬಾ ವಿ.ಎ. ಜಗದೀಶ್ ವಿರುದ್ದ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತು ಮಾಡಿ ಕರ್ತವ್ಯ ಲೋಪ ಹಾಗೂ ಇವರ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತಾಲೂಕು ವೀರಶೈವ ಮಹಾಸಭಾ ಒತ್ತಾಯಿಸಿದೆ.
ಅಕ್ರಮ ಖಾತೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಹಾಗು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್ ನೇತೃತ್ವದಲ್ಲಿ ತಾಲೂಕು ವೀರಶೈವ ಮುಖಂಡರು ಪಟ್ಟಣದ ರಾಮದಾಸ್ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಅಕ್ರಮ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಪ್ರದರ್ಶಿಸಿ ಮಾತನಾಡಿದ ವಿ.ಎಸ್.ಧನಂಜಯಕುಮಾರ್ ಕೆ.ಆರ್.ಪೇಟೆ ಪಟ್ಟಣದ ಸರ್ವೆ ನಂ 233/1ರಲ್ಲಿ ಕಾಳಶೆಟ್ಟಿ ಅವರ ಹೆಂಡತಿ ಕೆಂಪಮ್ಮ, ಮತ್ತು ಮಕ್ಕಳಾದ ನಿಂಗಶೆಟ್ಟಿ, ಭೈರಶೆಟ್ಟಿ ಮತ್ತು ಸಿದ್ದಶೆಟ್ಟಿ ಅವರುಗಳಿಂದ ದಿನಾಂಕ20-04-1963 ರಲ್ಲಿ 0-26 ಗುಂಟೆ ಜಮೀನನ್ನು ಚನ್ನಬಸವದೇವರ ಮಗ ಸಿದ್ದಲಿಂಗದೇವರು ಇವರಿಗೆ ಕ್ರಯ ಮಾಡಿಕೊಡಿಕೊಟ್ಟಿದೆ. ತಾವು ಕ್ರಯಕ್ಕೆ ಪಡೆದ ಸದರಿ ಜಮೀನಿನಲ್ಲಿ ಸಿದ್ದಲಿಂಗದೇವರು ಮತ್ತು ಕುಟುಂಬ ತಾಲ್ಲೂಕು ವೀರಶೈವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ನಿರ್ಮಿಸಲು 0-20 ಗುಂಟೆ ಜಮೀನನ್ನು ಗವಿಮಠದ ಚಂದ್ರಶೇಖರ ಸ್ವಾಮಿಗಳಿಗೆ ದಿನಾಂಕ 07-12-1964 ರಂದು ದಾನಪತ್ರದ ಮೂಲಕ ನೀಡಿರುತ್ತಾರೆ. ನಂತರ ಸದರಿ ಜಮೀನನ್ನು ಅನ್ಯಕ್ರಾಂತ ಮಾಡಿಸಿ ಪುರಸಭೆ ಅಸೆಸ್ಮೆಂಟ್ ನಂ 2701/ಬಿ ಆಗಿ ಸಿದ್ದಪಡಿಸಿದ ನಂತರ ಗವಿಮಠದ ಟ್ರಸ್ಟ್ ಸಭೆಯಲ್ಲಿ ನಿರ್ಣಯ ಮಾಡಿ 12-03-2001 ರಂದು ಪ್ರಧಾನ ಕಾರ್ಯದರ್ಶಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಕೆ.ಆರ್.ಪೇಟೆ ತಾಲ್ಲೂಕು ಇವರ ಹೆಸರಿಗೆ ಸದರಿ ನಿವೇಶನವನ್ನು ಖಾತೆ ವರ್ಗಾವಣೆ ಆಗಿ ಇ-ಸ್ವತ್ತು ಆಗಿದೆ. ನಂತರ ಎಂ.ಆರ್. ಸಹ ಆಗಿರುತ್ತದೆ. ಅಂದಿನಿಂದ ಇಂದಿನವರೆಗೂ ಸದರಿ ಆಸ್ತಿ ಹಾಲಿ ತಾಲೂಕು ವೀರಶೈವ ಮಹಾಸಭಾದ ಸ್ವಾಧೀನಾನುಭವದಲ್ಲಿಯೇ ಇದೆ.
ಹೀಗಿರುವಾಗ ಜಮೀನನ್ನು ಕ್ರಯಕ್ಕೆ ನೀಡಿದ ಕಾಳಶೆಟ್ಟಿ ಅವರ ಮಗ ಸಿದ್ದಶೆಟ್ಟಿರವರ ಹೆಂಡತಿ ಮಹದೇವಮ್ಮ, ಮತ್ತು ಮಕ್ಕಳು ಪಟ್ಟಣದ ಸಿವಿಲ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಕಾರ್ಯದರ್ಶಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಘವನ್ನು ಪಾರ್ಟಿ ಮಾಡದೇ ಹಾಗೂ ನಮಗೆ ಅರಿವಿಲ್ಲದಂತೆ ಸುಳ್ಳುದಾಖಲೆಗಳನ್ನು ನೀಡಿ ಮೋಸದಿಂದ ಏಕಪಕ್ಷೀಯವಾಗಿ ತಮ್ಮ ಪರ ಆದೇಶವನ್ನು ಪಡೆದಿರುತ್ತಾರೆ. ಅಂದಿನ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷರಾಗಿದ್ದ ತೋಟಪ್ಪಶೆಟ್ಟಿ ಹಾಗೂ ಈರಪ್ಪ ರವರುಗಳು ಇದರ ಬಗ್ಗೆ ಮಾಹಿತಿ ಇದ್ದರೂ ಸದರಿ ಆದೇಶದ ವಿರುದ್ದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದೇ ನಿರ್ಲಕ್ಷತೆ ವಹಿಸಿರುತ್ತಾರೆ. ನಂತರ ನಾವುಗಳು ನ್ಯಾಯಾಲಯದಲ್ಲಿ ಅಸಲುದಾವಾ ಸಂಖ್ಯೆ 296/2009 ಆದೇಶದಂತೆ ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಮನವಿ ಮಾಡಿದ್ದು ಈ ಕುರಿತು ಪಾಂಡವಪುರ ಉಪವಿಭಾಗಾಧಿಕಾರಿರವರಿಗೆ ಆರ್.ಮಿಸ್ ಪ್ರಕರಣ ಸಂಖ್ಯೆ 53/2021-22 ರಂತೆ ಎಲ್ಲಾ ದಾಖಲಾತಿಗಳನ್ನು ಒದಗಿಸಿಕೊಟ್ಟು ಪ್ರಕರಣವನ್ನು ವಜಾ ಮಾಡಿಸಿದ್ದು ಜಮೀನನ್ನು ಕಬಳಿಸಲು ಹೊರಟಿದ್ದವರಿಗೆ ಖಾತೆ ಮಾಡದಂತೆ ತಹಶೀಲ್ದಾರ್ ಅರ್ಜಿಯನ್ನು ವಿಲೇ ಇಟ್ಟಿರುತ್ತಾರೆ.
ನಂತರ ತಹಶೀಲ್ದಾರ್ ನಿಸರ್ಗಪ್ರಿಯ ಅವರ ತಾವೇ ಹಿಂಬರಹ ನೀಡಿ ವಿಲೇ ಮಾಡಿದ್ದ ಅರ್ಜಿಯನ್ನು ತಾಲೂಕು ವೀರಶೈವ ಮಹಾಸಭಾದ ಗಮನಕ್ಕೆ ತಾರದೆ ಆರ್.ಆರ್.ಟಿ.ಸಿ.ಆರ್/1143/2023-24 ರಂತೆ ದಿನಾಂಕ 17-02-2024 ರಂದು ರೇವಣ್ಣ ಬಿನ್ ಸಿದ್ದಶೆಟ್ಟಿ ರವರ ಮನವಿಯಂತೆ ಖಾತೆ ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಪವಿಭಾಗಾಧಿಕಾರಿಯವರಿಗೆ ವರ್ಗಾಯಿಸಿರುತ್ತಾರೆ. ನಂತರ 22-02-2024 ರಂದು ಉಪವಿಭಾಗಾಧಿಕಾರಿಗಳು ತಹಶೀಲ್ದಾರ್ ರವರ ಪ್ರಸ್ತಾವನೆಯನ್ನು ಪುರಸ್ಕರಿಸಿ ಆರ್.ಟಿ.ಸಿ ತಿದ್ದುಪಡಿ ಮಾಡಲು ಆದೇಶಿಸಿರುತ್ತಾರೆ. ಅಲ್ಲದೇ ಅದೇ ದಿನ ಕೆಲವೇ ಗಂಟೆಗಳಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿಯ ಹೆಸರಿನಲ್ಲಿದ್ದ ಜಮೀನನ್ನು ಮಹದೇವಮ್ಮನವರ ಹೆಸರಿಗೆ ಆರ್.ಟಿ.ಸಿ ಹಾಗೂ ಮ್ಯುಟೇಷನ್ ಎಲ್ಲವನ್ನೂ ಅವರ ಹೆಸರಿಗೆ ವರ್ಗಾಯಿಸಿರುತ್ತಾರೆ.
ಸೇವೆಯಿಂದ ವಜಾಗೊಳಿಸಿ.
ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಖಿಲ ಭಾರತ ವೀರಶೈವ ಮಹಾಸಭಾಗೆ ಸೇರಿದ ಜಮೀನನ್ನು ಏಕಪಕ್ಷೀಯವಾಗಿ ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಡುವ ಕಾರ್ಯದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್, ಕೆ.ಆರ್.ಪೇಟೆ ತಹಶೀಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಕಛೇರಿಯ ಕಾರ್ಯನಿರ್ವಾಹಕ ಶಿರಸ್ತೇದಾರ್ ರವಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ, ಕಸಬಾ ರಾಜಸ್ವನಿರೀಕ್ಷಕ ಜ್ಞಾನೇಶ್, ಕಸಬಾ ಗ್ರಾಮಾಭಿವೃದ್ದಿ ಅಧಿಕಾರಿ ಜಗದೀಶ್ ನೇರವಾಗಿ ಹೊಣೆಗಾರರಾಗಿದ್ದು ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ತಾಲೂಕಿನಲ್ಲಿ ಒಂದೇ ದಿನ ಇದೇ ರೀತಿ ಖಾತೆ, ಮ್ಯುಟೇಷನ್ ಮಾಡಿಕೊಟ್ಟಿರುವ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಶ್ರೀ ಸಾಮಾನ್ಯರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಿಕೊಡಬೇಕು ಎಂದು ಒತ್ತಾಯ ಮಾಡಿರುವ ವಿ.ಎಸ್.ಧನಂಜಯಕುಮಾರ್ ಈ ಪ್ರಕರಣದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಅವರ ಬೆಂಬಲಿಗರ ಕೈವಾಡವಿದೆ ಎಂದು ಆರೋಪಿದರು.
ಸುದ್ದಿಗೋಷ್ಟಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನಕಾರ್ಯದರ್ಶಿ ಈರಪ್ಪ, ವೀರಶೈವ ಸಮುದಾಯದ ಮುಖಂಡರಾದ ಬಸವಲಿಂಗಪ್ಪ, ಮಾದೇಶ, ರುದ್ರಪ್ಪ, ಡಿ.ಎ.ಮಹೇಶ್, ಶಿವಮೂರ್ತಿ, ದಿನೇಶ, ಎಲ್.ಐ.ಸಿ ಶಿವಪ್ಪ, ಡಿ.ಸಿ.ಕುಮಾರ್, ಕೇಬಲ್ ಗುಂಡಣ್ಣ, ಶಿವಪ್ಪ, ಮಹೇಶ್, ಮಹದೇವ ಸೇರಿದಂತೆ ಹಲವರಿದ್ದರು.