ಅಕ್ರಮ ಕೆಂಪುಮಣ್ಣು ಸಾಗಾಣಿಕೆ ವಾಹನಗಳ ಜಪ್ತಿಗೆ ಯಾಕಾಪೂರ ಆಗ್ರಹ

ಚಿಂಚೋಳಿ,ಏ.8- ತಾಲೂಕಿನ ಶಾದಿಪುರ ಗ್ರಾಮದ ವನ್ಯಧಾಮದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಿಸುವ ವಾಹನಗಳ ಓಡಾಟ ಹೆಚ್ಚಾಗಿದ್ದು, ಇದು ಅಪಘಾತಕ್ಕೆ ಅವಕಾಶ ಮಾಡಿಕೊಡುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಜೆಡಿಎಸ್ ಮುಖಂಡ ಸಂಜೀವನ್ ಆರ್ ಯಾಕಾಪುರ್ ಅವರು ಒತ್ತಾಯಿಸಿದ್ದಾರೆ.
ಇಲ್ಲಿಂದ ಅಕ್ರಮವಾಗಿ ಕೆಂಪುಮಣ್ಣು ಸಾಗಿಸುವ ವಾಹನ ಯಾಕಾಪೂರ ಅವರ ವಾಹನದ ಮೇಲೆ ವೇಗದಿಂದ ನುಗ್ಗಲು ಬರುತ್ತಿದ್ದರಿಂದ, ಇವುಗಳನ್ನು ತಡೆದ ಪಕ್ಷದ ಕಾರ್ಯಕರ್ತರು, ಇಲ್ಲಿನ ಅಕ್ರಮ ಕೆಂಪುಮಣ್ಣು ಕಳ್ಳಸಾಗಣಿಕೆಗೆ ಕಡಿವಾಣ ಹಾಕುವಂತೆ ಯಾಕಾಪೂರ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು.
ಅಕ್ರಮವಾಗಿ ಕೆಂಪುಮಣ್ಣು ಸಾಗಿಸುತ್ತಿರುವ 10 ವಾಹನಗಳನ್ನು ತಡೆದ ಯಾಕಪೂರ ಬೆಂಬಲಿಗರು, ಇವುಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಇಲ್ಲಿನ ವನ್ಯಧಾಮದಲ್ಲಿ ನಿತ್ಯ ಸಂಜೆಯ ವೇಳೆಯಲ್ಲಿ ಈ ಅಕ್ರಮ ಸಾಗಣಿಕೆ ನಡೆಯುತ್ತದೆ, ಅತಿವೇಗದಿಂದ ಹೋಗುವ ಈ ಅಕ್ರಮ ವಾಹನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಇಷ್ಟೆಲ್ಲ ಆಗುತ್ತಿದ್ದರು ಇವುಗಳ ಕಡಿವಾಣಕ್ಕೆ ಪ್ರಯತ್ನಿಸದಿರುವುದು ನೋಡಿದರೆ ಅಧಿಕಾರಿಗಳು ಈ ವ್ಯವಹಾರದಲ್ಲಿ ಶಾಮಿಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ ಎಂದು ಯಾಕಪೂರ ಆರೋಪಿಸಿದ್ದಾರೆ.
ಕೂಡಲೇ ಅಕ್ರಮವಾಗಿ ಕೆಂಪು ಮಣ್ಣು ಸಾಗಿಸುವ ವಹನಗಳನ್ನು ಜಪ್ತಿ ಮಾಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಜೀವನ ಯಾಕಾಪುರ್ ಅಭಿಮಾನಿ ಬಳಗದವರು ಮತ್ತು ಜೆಡಿಎಸ್ ಮುಖಂಡರು ಇದ್ದರು.