ಅಕ್ರಮ ಕಲ್ಲುಗಣಿಗಾರಿಕೆ, ಗಣಿ, ಅಧಿಕಾರಿಗಳ ಭೇಟಿ

ಹೊಸಕೋಟೆ, ಜು. ೨೯: ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಖಾಜಿ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಕಾಮರಸನಹಳ್ಳಿ ಗ್ರಾಮದಲ್ಲಿ ಸ್ಥಳಿಯರಿಂದ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಕಾಮರಸನಹಳ್ಳಿ ಗ್ರಾಮದ ಸರ್ವೆ ನಂಬರ್ ೧೩ ಸರ್ಕಾರಿ ಗೋಮಾಳದಲ್ಲಿ ಇದೇ ಗ್ರಾಮದ ಕೃಷ್ಣಪ್ಪ, ಮುನಿರಾಜ್.ಕೆ.ಎಂ., ಚೇತನ್, ಮಹೇಶ್, ರಾಜು ಎಂಬುವವರು ಸುಮಾರು ೬ ತಿಂಗಳಿನಿಂದ ಅಕ್ರಮ ಗಣಿಗಾರಿಕೆ ನಡೆಸಿ, ರಾತ್ರಿ ಸಮಯದಲ್ಲಿ ಲಾರಿಗಳಲ್ಲಿ ಕಲ್ಲುಗಳನ್ನು ಸಾಗಿಸುತ್ತಿರುವ ಬಗ್ಗೆ ಇದೇ ಗ್ರಾಮದ ಲೋಕೇಶ್, ಮನೋಹರ್, ಶಂಕರ್ ಕೆ.ಸಿ.ನಾಗರಾಜ್, ಮಹೇಶ್ ಸೇರಿದಂತೆ ಗ್ರಾಮಸ್ಥರು ೮ ದಿನಗಳ ಹಿಂದೆ ಕಲ್ಲುಗಳನ್ನು ಸಾಗಿಸುವಾಗ ಲಾರಿ ಸಮೇತ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ಹಿಡಿದು ಒಪ್ಪಿಸಿ ಪ್ರಕರಣ ದಾಖಲು ಮಾಡಲಾಗಿತ್ತು. ಈ ವಿಚಾರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ದೂರನ್ನು ನೀಡುವ ಮೂಲಕ ಸಮಗ್ರ ತನಿಖೆಗೆ ಒತ್ತಾಯಿಸಲಾಗಿತ್ತು.
ದೂರಿನ ಮೇರೆಗೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಸವಿತಾ ಕುಮಾರಿ, ಸಹಾಯಕ ಅಭಿಯಂತರ ರಾಜಶೇಖರ್, ರಾಜಸ್ವ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಮನೋಹರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯ ಮಾಹಿತಿ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಅಭಿಮಾನಿ ಮುನಿರಾಜು ಮಾತನಾಡಿ ಗ್ರಾಮದ ಕೆಲವು ಪ್ರಭಾವಿಗಳು ರಾಜಕೀಯ ದುರುದ್ದೇಶದಿಂಧ ಅಧಿಕಾರ ದುರುಪಯೋಗ ಪಡಿಸಿಕೊಂಡು ನಮ್ಮ ಮೇಲೆ ಅಕ್ರಮ ಗಣಿಗಾರಿಕೆ ದೂರು ನೀಡಿರುವುದು ಶುದ್ದ ಸುಳ್ಳು, ನಮ್ಮ ಮೇಲೆ ಆರೋಪ ಮಾಡಿರುವವರೆ ಗಣಿಗಾರಿಕೆ ಮಾಡುತ್ತಿದ್ಧಾರೆ. ವಿನಾಕಾರಣ ಇವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಮಾಯಕರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಭಯ ಹುಟ್ಟಿಸಿ, ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಂಬಂಧಟ್ಟ ಅಧಿಕಾರಿಗಳು ಅಕ್ರಮ ಗಣಿಗಾರಿಕೆ, ಕೆರೆಯಲ್ಲಿ ಮಣ್ಣು ಗಣಿಗಾರಿಕೆ ಮಾಡುವವರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ದೂರುದಾರರಾದ ಗ್ರಾಪಂ ಮಾಜಿ ಸದಸ್ಯ ನಾಗರಾಜ್ ಮಾತನಾಡಿ ಅಕ್ರಮ ಗಣಿಗಾರಿಕೆ ಮಾಡುವಾಗ ಮಾಲು ಸಮೇತ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ಕೂಡ ದಾಖಲು ಮಾಡಿದ್ದು, ಜೊತೆಗೆ ಪರಿಶೀಲನೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೂ ದೂರು ನೀಡಿದ್ದ ಹಿನ್ನೆಲೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾಗ ತಪ್ಪಿಸ್ಥರು ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಪಕ್ಷ ಸಂಘಟನೆ ಮಾಡುವ ಪ್ರಮೇಯ ನಮಗಿಲ್ಲ. ಪ್ರತಿ ಭಾರಿ ನಮ್ಮ ಗ್ರಾಮದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಹೆಚ್ಚು ಮತ ಬರುತ್ತಿದೆ. ವಿನಾ ಕಾರಣ ಪರಿಶಿಷ್ಟಿ ಜಾತಿ, ಸಮುದಾಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಎಂದರು.