ಅಕ್ರಮ ಕಟ್ಟಡ ತೆರುವಿಗೆ ಒತ್ತಾಯ

ರಾಯಚೂರು, ಜ.೧೭- ನಗರದ ಕುಬೇರ ಮತ್ತು ನೃಪತುಂಗ ಹೋಟೆಲ್ ಹಿಂಭಾಗದ ರಾಜಾ ಕಾಲುವೆ ಕಂದಕ ದಿಂದ ಬಸವೇಶ್ವರ ವೃತ್ತದವರೆಗೆ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ನೃಪತುಂಗಾ ಹೋಟಲ್, ಕುಬೇರ ಹೋಟೆಲ್ ಹಿಂಭಾಗದ ಸುಮಾರು ವರ್ಷಗಳಿಂದ ಪುರಾತನ ಕಂದಕ ಹಾಗೂ ರಾಜಾ ಕಾಲುವೆಯ ಜಾಗವನ್ನು ಕಬಳಿಸಿ ಕಟ್ಟಡಗಳನ್ನು ನಿರ್ಮಿಸಿರುತ್ತಾರೆ. ಈ ರೀತಿಯಾಗಿ ನಗರದ ಮಧ್ಯಭಾಗದ ಇತಿಹಾಸ ಹೊಂದಿರುವ ರಾಯಚೂರಿನ ಕೋಟೆ ಪಕ್ಕದಲ್ಲಿ ರಾಜಾ ಕಾಲುವೆಯನ್ನು ಕೆಲ ರಾಜಕೀಯ ಪ್ರಭಾವಿಗಳ ಕುಮ್ಮಕ್ಕಿನಿಂದ ಅವರವರ ಸಂಬಂಧಪಟ್ಟ ವ್ಯಕ್ತಿಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಟ್ಟ ಡಗಳನ್ನು ನಿರ್ಮಿಸಿ ಕೊಂಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯಾಗಿ ಅನಧಿಕೃತ ಜಾಗದ ಕಬಳಿಕೆ ನಡೆಯುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಹಾಗೂ ಪುರಾತತ್ವ ಇಲಾಖೆ ಮೌನವಹಿಸಿರುವುದು ಸಾರ್ವಜನಿಕರಿಗೆ ಹಾಗೂ ಸಂಘಟನೆಗಳಿಗೆ ಸಂಶಯ ಬಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.
ತಕ್ಷಣವೇ ಸಂಬಂಧಪಟ್ಟ ಪುರಾತತ್ವ ಇಲಾಖೆ ಹಾಗೂ ನಗರಸಭೆ ಪೌರಾಯುಕ್ತರು ಮತ್ತು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಯಚೂರು ಇವರಿಗೆ ಸೂಕ್ತ ನಿರ್ದೇಶನ ನೀಡಿ ತಕ್ಷಣವೇ ಸದರಿ ಕಟ್ಟಡಗಳನ್ನು ತೆರವುಗೊಳಿಸಲು ನಮ್ಮ ಸಂಘಟನೆಯ ವತಿಯಿಂದ ಈ ಮೂಲಕ ತಮ್ಮಲ್ಲಿ ದೂರು ಸಲ್ಲಿಸುತ್ತಿದ್ದೇವೆ. ಸದರಿ ಕಟ್ಟಡಗಳನ್ನು ೧೫ ದಿನಗಳೊಳಗಾಗಿ ತೆರವುಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಲಾಗಿದೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೇಮರಾಜ ಆಸ್ಕಿಹಾಳ, ಜಿ. ನರಸಿಂಹಲು, ಉರುಕುಂದಿ, ಪ್ರಭುರಾಜ, ಲಕ್ಷ್ಮಣ, ವೆಂಕಟಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.