ಅಕ್ರಮ ಕಟ್ಟಡ ಕಟ್ಟುವ ಪ್ರಯತ್ನಕ್ಕೆ ತಡೆ

ಬಂಟ್ವಾಳ, ಎ.೬- ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ಪುರಸಭೆ ಹಾಗೂ ಕಂದಾಯ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಕಟ್ಟಡ ಕಟ್ಟುವ ಪ್ರಯತ್ನ ನಡೆಸಿದ ಖಾಸಗಿ ವ್ಯಕ್ತಿಗಳ ಕಟ್ಟಡಕ್ಕೆ ಸೋಮವಾರ ಕಂದಾಯ ಇಲಾಖೆ ಹಾಗೂ ಪುರಸಭಾಧಿಕಾರಿಗಳು ಜಂಟಿಯಾಗಿ ತಡೆ ನೀಡಿದ್ದಾರೆ.
ಮೆಲ್ಕಾರ್ ಜಂಕ್ಷನ್ನಿನಲ್ಲಿ ಮಂಗಳೂರು ವಿವಿ ರಸ್ತೆಯ ಬದಿಯಲ್ಲೇ ಇರುವ ಪರಂಬೋಕು ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮ ಕಟ್ಟಡ ಕಟ್ಟಿ ಬಾಡಿಗೆಗೆ ನೀಡಿದ್ದರು. ಇದಕ್ಕೆ ಪುರಸಭೆ ಯಾವುದೇ ಪರವಾನಿಗೆ ನೀಡಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತರು, ಬಂಟ್ವಾಳ ತಹಶೀಲ್ದಾರ್ ಹಾಗೂ ಪುರಸಭಾಧಿಕಾರಿಗಳಿಗೆ ದೂರು ನೀಡಿ ಅಕ್ರಮ ಕಟ್ಟಡ ತೆರವಿಗೆ ಆಗ್ರಹಿಸಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರ ಆದೇಶದ ಹಿನ್ನಲೆಯಲ್ಲಿ ರಸ್ತೆ ಬದಿಯ ಅಕ್ರಮ ಕಟ್ಟಡ ತೆರವಿಗೆ ಪುರಸಭಾಧಿಕಾರಿಗಳು ಸೂಚಿಸಿದ್ದರು.
ಈ ಅಕ್ರಮ ಕಟ್ಟಡ ತೆರವಿಗೆ ಆದೇಶ ಆಗಿರುವ ಹಿನ್ನಲೆಯಲ್ಲಿ ಖಾಸಗಿ ವ್ಯಕ್ತಿಗಳು ಕಟ್ಟಡ ತೆರವುಗೊಳಿಸದೆ ಮತ್ತದೇ ಕಟ್ಟಡದ ಹಿಂಭಾಗದಲ್ಲಿ ಪುನಃ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದ ಹಿನ್ನಲೆಯಲ್ಲಿ ಸೋಮವಾರ ಕಂದಾಯ ಹಾಗೂ ಪುರಸಭಾಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿದ ಅಕ್ರಮ ಕಟ್ಟೋಣಕ್ಕೆ ತಡೆ ನೀಡಿರುವುದಲ್ಲದೆ ಅಕ್ರಮ ನಿರ್ಮಾಣ ಮುಂದುವರಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ ಎನ್ನಲಾಗಿದೆ.