ಅಕ್ರಮ ಆಸ್ತಿ ಸಂಪಾದನೆಗೆ ಡಿಕೆಶಿ ಜೈಲುಪಾಲು : ರವಿ

ಬೆಂಗಳೂರು, ಡಿ. ೭- ಭ್ರಷ್ಟಚಾರ ಪ್ರಕರಣದಿಂದ ಪಾರಾಗಲು ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಗಳನ್ನು ಮರೆಮಾಚಲು ಕೆಪಿಸಿಸಿ ಡಿ.ಕೆ. ಶಿವಕುಮಾರ್ ಬಿಜೆಪಿ ಸೇರಿದ್ದಕ್ಕೆ ತಮ್ಮನ್ನು ಜೈಲಿಗೆ ಹಾಕಿಸಿದ್ದರು ಎಂಬ ಹೇಳಿಕೆ ನೀಡಿದ್ದಾರೆ. ಇದು ಸುಳ್ಳು ಮಾತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿದ್ದು ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿದ್ದೇ ಹೊರತು,ಬಿಜೆಪಿಗೆ ಬರಲಿಲ್ಲ ಎಂದು ಅವರನ್ನು ಜೈಲಿಗೆ ಕಳುಹಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಹೋದರೆ, ಅಕ್ರಮ ಆಸ್ತಿ ಪ್ರಕರಣದಿಂದ ಪಾರಾಗಬಹುದು ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಮನವರಿಕೆಯಾಗಿದ್ದರೆ ಅವರು ಎಲ್ಲರಗಿಂತ ಮೊದಲೇ ಬಿಜೆಪಿಗೆ ಬಂದು ಸೇರುತ್ತಿದ್ದರೂ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ತಮ್ಮಂತವರಿಗೆ ಅವಕಾಶವಿಲ್ಲ ಎಂದು ಡಿ.ಕೆ. ಶಿವಕುಮಾರ್‌ಗೆ ಗೊತ್ತಿದೆ. ಹಾಗಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಗೊಂದಲದಿಂದಪಾರಾಗಲು ಈ ರೀತಿ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಮನಸ್ಥಿತಿಯೇ ಬೇರೆ. ಅವರದು ಗೂಂಡಾ ರಾಜಕಾರಣ, ಡಿ.ಕೆ.ಶಿ. ಪ್ರಕಾರ ನಾಯಕತ್ವ ಅಂದರೆ ಗೂಂಡಾಗಿರಿ ಮಾಡುವುದು, ಚುನಾವಣೆಗೆ ದುಡ್ಡು ಮಾಡಿರುವವರೆ ನಿಲ್ಲಬೇಕೆಂದು ಅವರ ಮನಸ್ಥಿತಿ ಎಂದು ಟೀಕಿಸಿದರು.
ಬಿಜೆಪಿ ಕಾರ್ಯಕರ್ತರ ಪಕ್ಷ ಡಿಕೆಶಿ ಅಂತವರನ್ನು ನಮ್ಮ ಪಕ್ಷ ಒಪ್ಪಲ್ಲ. ಡಿಕೆಶಿ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಮತ್ತೇ ಸ್ಪರ್ಧಿಸುವುದಕ್ಕೆ ಮಾಜಿ ಸಚಿವ ಚಿಮ್ಮನ ಕಟ್ಟಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ಕಾಲದ ಪ್ರಶ್ನಾತೀತ ನಾಯಕ ಭವಿಷ್ಯದ ಪಿಎಂ ಎಂದೆಲ್ಲಾ ತುತ್ತೂರಿ ಊದಿಸಿಕೊಂಡಿದ್ದ ಸಿದ್ದರಾಮಯ್ಯನವರಿಗೆ ಎಂತಹ ದುರ್ಗತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು. ಸಿದ್ದರಾಮಯ್ಯ ಆಗದೆ ಇರುವವರು ಚಿಮ್ಮನಕಟ್ಟಿಯವರಿಗೆ ಹೀಗೆ ಹೇಳುವಂತೆ ಟ್ಯೂನ್ ಮಾಡಿ, ಕೀ ಕೊಟ್ಟಿರಬಹುದು ಇಲ್ಲದಿದ್ದರೆ ಚಿಮ್ಮನಕಟ್ಟೆಯವರಿಗೆ ಈ ಹೇಳಿಕೆ ಮಾಡುವ ಧೈರ್ಯ ಬರುತ್ತಿರಲಿಲ್ಲ ಎಂದರು.
ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನಖರ್ಗೆಯವರನ್ನು ಸಿಎಂ ಆಗದಂತೆ ನೋಡಿಕೊಂಡರು. ಡಾ. ಜಿ.ಪರಮೇಶ್ವರನ್ನು ಚುನಾವಣೆಯಲ್ಲಿ ಸೋಲಿಸಿದರು. ಹೀಗಾಗಿ ಕಾಂಗೆಸ್‌ನಲ್ಲಿ ಒಂದು ದೊಡ್ಡ ವರ್ಗ ಸಿದ್ದರಾಮಯ್ಯರವನ್ನು ಕಂಡರೆ ಕುದಿಯುತ್ತಿದೆ ಎಂದ ಅವರು ಇದೆಲ್ಲ ಕಾಂಗ್ರೆಸ್‌ನ ಆಂತರಿಕ ವಿಚಾರ ನಮಗೇಕೆ ಅದರ ಉಸಾಬರಿ ಎಂದು ಕೊನೆಯಲ್ಲಿ ಮಾತು ಸೇರಿಸಿದರು.