ಬೆಂಗಳೂರು,ಜೂ.೨೮-ನೂರಾರು ಎಕರೆ ಜಮೀನು,ಅಪಾರ ಪ್ರಮಾಣದ ಹಣ,ಕಾರುಗಳು,ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆಯಾದ ಹಿನ್ನಲೆಯಲ್ಲಿ ಕೆಆರ್ ಪುರಂ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.ಅಜಿತ್ ರೈ ಕಚೇರಿ,ಹತ್ತು ಕಡೆಗಳಲ್ಲಿ ಮನೆ,ಸಂಬಂಧಿಕರ ಮನೆಗಳ ಮೇಲೆ ನಿನ್ನೆ ಮುಂಜಾನೆಯಿಂದ ಏಕಕಾಲದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಪತ್ತೆ ಮಾಡಿ ಪರಿಶೀಲನೆ ಕೈಗೊಂಡಿದ್ದರು.ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಸೇರಿದಂತೆ ಮೌಲ್ಯಯುತ ವಸ್ತುಗಳು ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಅಜಿತ್ ಕುಮಾರ್ ರೈ ರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ಅಜಿತ್ ರೈ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ೪೦ ಲಕ್ಷ ನಗದು ಸೇರಿದಂತೆ ೧ ಕೋಟಿ ೯೦ ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಜಿತ್ ರೈಗೆ ಸಂಬಂಧಿಸಿದ ಸುಮಾರು ೧೧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ೪ ಫಾರ್ಚ್ಯುನರ್, ೪ ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಜರ್ ಸೇರಿದಂತೆ ಐಷಾರಾಮಿ ಕಾರುಗಳು. ನಾಲ್ಕು ಐಶಾರಾಮಿ ಬೈಕ್ ಗಳು ಪತ್ತೆಯಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಅಜಿತ್ ರೈ ಸುಮಾರು ೧೦೦೦ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್‌ನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ೩೨ ಲಕ್ಷ ರೂ ಹಣ ಸೇರಿದಂತೆ ಅಂದಾಜು ೧.೪೫ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನೊಬ್ಬ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ರಾಮಪ್ಪ ಶಿರೂರ್ ಎಂಬುವವರ ಮನೆಯಲ್ಲಿ ಲೋಕಾಯುಕ್ತ ತಂಡ ದಾಳಿ ಮಾಡಲಾಗಿದೆ. ಕೃಷ್ಣಾರಿಗೆ ಸಂಬಂಧಿಸಿದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ತಂಡಕ್ಕೆ ಒಟ್ಟು ೭೧.೮೮ ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.ಮುದ್ದೇಬಿಹಾಳದ ಜಿನ್ನಪ್ಪ ಪದ್ಮಣ್ಣ ಶೆಟ್ಟಿಗೆ ಸೇರಿದ ೩ ಸ್ಥಳಗಳಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಜಿನ್ನಪ್ಪ ಪದ್ಮಣ್ಣ ಶೆಟ್ಟಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಾಳಿ ವೇಳೆ ಒಟ್ಟು ೧.೪೨ ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ಬಸವನ ಬಾಗೇವಾಡಿ ಪಿಡಬ್ಲ್ಯುಡಿ ಉಪವಿಭಾಗದ ಎಇಇ ಕಚೇರಿಯ ಕಿರಿಯ ಅಭಿಯಂತರರು ಭೀಮನಗೌಡ ಬಿರಾದಾರ್ ಗೆ ಸೇರಿದ ೨ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ ೧.೯೦ ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಮಡಿಕೇರಿ ಗ್ರಾಮೀಣ ನೀರು ಮತ್ತು ಒಳಚರಂಡಿ ಎಫ್‌ಡಿಎ ಅಬ್ದುಲ್ ಬಷೀರ್ ಗೆ ಸೇರಿದ ಮೂರು ಕಡೆ ದಾಳಿ ನಡೆಸಿ ೧೪ ಲಕ್ಷ ನಗದು ಸೇರಿ ೧.೧೪ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. ಇತ್ತ ಸಿಂಧನೂರು ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಮೆಂಬರ್ ಸೆಕ್ರೆಟರಿ ಶರಣಪ್ಪಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ೧೪ ಲಕ್ಷ ನಗದು ಸೇರಿ ೨.೦೩ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ.ತುಮಕೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೆ.ಹೆಚ್ ರವಿಗೆ ಸೇರಿದ ಆರು ಕಡೆ ದಾಳಿ ನಡೆಸಿ ೪.೨೭ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ರಾಯಚೂರು ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್ಗೆ ಸೇರಿದ ಎರಡು ಕಡೆ ದಾಳಿ ನಡೆಸಿ ೨.೭೧ ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.
ಹಗರಿಬೊಮ್ಮನಹಳ್ಳಿ ಇಇ ಜೆಸ್ಕಾಂ ಶೇಖರ್ ಹನುಮಂತ ಬಹುರೂಪಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ ೩ ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಗೌರಿಬಿದನೂರು ಅಬಕಾರಿ ಇನ್ಸ್‌ಪೆಕ್ಟರ್ ವಿ.ರಮೇಶ್ ಗೆ ಸೇರಿದ ಐದು ಕಡೆ ದಾಳಿ ನಡೆಸಿ ೨.೪೪ ಕೋಟಿ ರೂ ಪತ್ತೆ ಮಾಡಿದ್ದಾರೆ.
ಹಗರಿಬೊಮ್ಮನಹಳ್ಳಿ ಇಇ ಜೆಸ್ಕಾಂ ಶೇಖರ್ ಹನುಮಂತ ಬಹುರೂಪಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ ೩ ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಗೌರಿಬಿದನೂರು ಅಬಕಾರಿ ಇನ್ಸ್‌ಪೆಕ್ಟರ್ ವಿ.ರಮೇಶ್ ಗೆ ಸೇರಿದ ಐದು ಕಡೆ ದಾಳಿ ನಡೆಸಿ ೨.೪೪ ಕೋಟಿ ರೂ ಪತ್ತೆ ಮಾಡಿದ್ದಾರೆ.