ಅಕ್ರಮ ಅಕ್ಕಿ ಸಾಗಾಟ: ತಪಾಸಣೆ-ಬಂಧನ

ಬಾದಾಮಿ,ಜು19: ಸರಕಾರದ ವಿವಿದ ಯೋಜನೆಗಳಲ್ಲಿ ಉಚಿತವಾಗಿ ಫಲಾನುಭವಿಗಳಿಗೆ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ, ವಾಹನವನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದು, ಚಾಲಕನನ್ನು ಹಿಡಿದು ಬಂಧಿಸಿದ ಘಟನೆ ತಾಲೂಕಿನ ರೇಲ್ವೆ ಸ್ಟೇಶನ್ ಗ್ರಾಮದ ಹತ್ತಿರ ನಡೆದಿದೆ.
ಬಾದಾಮಿಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಅಶೋಕ ಲೇಲ್ಯಾಂಡ್ ವಾಹನದಲ್ಲಿ ಸರಕಾರದ ಅನುಮತಿ ಇಲ್ಲದೇ ರೂ.23100 ಮೌಲ್ಯದ 1050 ಕೆಜಿ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದರು. ಆಹಾರ ಇಲಾಖೆಯ ನಿರೀಕ್ಷಕ ಮಂಜುನಾಥ ರೊಟ್ಟಿ ಹಿಡಿದು ತಪಾಸಣೆ ಮಾಡಿದ್ದಾರೆ. ವಾಹನದ ಚಾಲಕ ಸಿಕ್ಕಿಬಿದ್ದಿದ್ದಾನೆ. ತಪಾಸಣೆ ಸಂದರ್ಭದಲ್ಲಿ ಇನ್ನೋರ್ವ ಆಹಾರ ನಿರೀಕ್ಷಕ ಶಬ್ಬೀರ ಅಹ್ಮದ ಕೋತವಾಲ ಹಾಜರಿದ್ದರು. ವಾಹನ ಚಾಲಕ ಮೂಲತಃ ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬೈರವಾಡಗಿ ಗ್ರಾಮದ(ಹಾಲಿ ವಸ್ತಿ;ಸಿಕ್ಕೇರಿ ಕ್ರಾಸ್) ಲಾಡ್ಲೆಮಶಾಕ ಬುಡೇಸಾಹೇಬ ಯರನಾಳ ಎಂಬಾತನನ್ನು ಬಂಧಿಸಲಾಗಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.