ಅಕ್ರಮವಾಗಿ ಸಾಗಿಸುತ್ತಿದ್ದ 6.57 ಲಕ್ಷ ರೂ.ಮೌಲ್ಯದ ಪಡಿತರ ಅಕ್ಕಿ ಜಪ್ತಿ

ವಿಜಯಪುರ,ಮಾ.24-ಅನ್ನಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನವನ್ನು ಜಿಲ್ಲೆಯ ಸಿಂದಗಿ ಪಟ್ಟಣದ ಕಲಕೇರಿ ಬೈಪಾಸ್ ಬಳಿ ತಡೆದಿರುವ ಪೊಲೀಸರು 6.57ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಲಾರಿ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ನೊಂದಣಿ ಸಂಖ್ಯೆ ಹೊಂದಿದ್ದ ಜಾರಿಯಲ್ಲಿ 502ಅಕ್ಕಿ ಚೀಲವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಬೆಲೆ 6.57 ಲಕ್ಷ ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಿಂದ ಹೊರರಾಜ್ಯಕ್ಕೆ ಅಕ್ರಮವಾಗಿ ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ ಈ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಅಕ್ರಮವಾಗಿ ಅಕ್ಕಿ ಹೊರರಾಜ್ಯಕ್ಜೆ ಸಾಗಿಸುತ್ತಿರುವ ಕುರಿತು ಕಲಕೇರಿ ದಲಿತ ಸೇನಾ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಆಲಮೇಲ ಹಾಗೂ ಅವರ ತಂಡ ಕಲಕೇರಿ ಬೈಪಾಸ್ ಬಳಿ ಲಾರಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಹೊರರಾಜ್ಯಕ್ಕೆ ಸಾಗಿಸುತ್ತಿರುವ ಕುರಿತು ಆಹಾರ ಇಲಾಖೆಯ ಆಹಾರ‌ ನಿರೀಕ್ಷಕ ಅಮಸಿದ್ದ ದಳವಾಯಿ ಸಿಂದಗಿ ಪೊಲೀಸರಿಗೆ ದೂರು ನೀಡಿದ್ದಾರೆ.