ಅಕ್ರಮವಾಗಿ ಮದ್ಯ ಮಾರಾಟ: ಓರ್ವನ ಬಂಧನ, ಇಬ್ಬರು ಪರಾರಿ

ಕಲಬುರಗಿ,ಫೆ.21-ಸಿರನೂರ, ರಾಜಾಪುರ-ಶಹಾಬಾದ ರಸ್ತೆ ಮತ್ತು ಬಾಪು ನಾಯಕ ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಸಿರನೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪಿಎಸ್‍ಐ ಸೈಯದ್ ಪಟೇಲ್ ಮತ್ತು ಸಿಬ್ಬಂದಿ ದಾಳಿ ನಡೆಸಿ 1435 ರೂ.ಮೊತ್ತದ ಮದ್ಯ ಜಪ್ತಿ ಮಾಡಿದ್ದಾರೆ. ಆರೋಪಿ ರಾಜೇಶ ಇಬೆದಾರ ಪರಾರಿಯಾಗಿದ್ದು, ಆತನ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜಾಪುರ-ಶಹಾಬಾದ ರಸ್ತೆಯ ಕಿರಾಣಾ ಸ್ಟೋರ್ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಎಸ್‍ಐ ಮಹ್ಮದ್ ಇಬ್ರಾಹಿಂ ಮತ್ತು ಸಿಬ್ಬಂದಿ ದಾಳಿ ನಡೆಸಿ 1470 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಆರೋಪಿ ಕೃಷ್ಣ ಪವಾರ ಎಂಬಾತ ಪರಾರಿಯಾಗಿದ್ದು, ಆತನ ವಿರುದ್ಧ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಪುನಾಯಕ ತಾಂಡಾದ ಕಿರಾಣಿ ಅಂಗಡಿ ಮುಂದುಗಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಮತ್ತು ಸಿಬ್ಬಂದಿ ದಾಳಿ ನಡೆಸಿ ವಿನೋದ ರಾಠೋಡ್ ಎಂಬಾತನನ್ನು ಬಂಧಿಸಿ 2,707 ರೂ.ಮದ್ಯ ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.