
ವಿಜಯಪುರ:ಮೇ.5: ಅಕ್ರಮವಾಗಿ ಅಫೀಮ್ ಗಿಡದ ಕಡ್ಡಿಯ ಪುಡಿ ಮತ್ತು ಪೌಡರ್‍ನ್ನು ಸಾಗಾಟ ಮಾಡಿದ ಹರಿಯಾಣಾ ರಾಜ್ಯದ ಅಂಬಾಲಾ ಗ್ರಾಮದ ಗಣೇಶ ತಂ ದಮರ ಎಂಬ ಆರೋಪಿತನಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯ 6 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಟ್ರಾನ್ಸಪೋರ್ಟ ವಾಹನದಲ್ಲಿ 29.800 ಕೆ.ಜಿ. ಗ್ರಾಮದ ಅಫೀಮ ಗಿಡದ ಕಡ್ಡಿಯ ಪುಡಿ ಹಾಗೂ ಪೌಡರನ್ನು ಸಾಗಿಸುವಾಗ ಇಂಡಿ ತಾಲೂಕಿನ ಧೂಳಖೇಡ ಬಳಿ ಹಲೆಯ ವಾಣಿಜ್ಯ ಇಲಾಖೆಯ ತನಿಖಾ ಠಾಣೆ ಎದುರು ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಅವರು ತಪಾಸಣೆ ಮಾಡಿ ಅವನ ವಾಹನದಲ್ಲಿದ್ದ ಅಫೀಮ ಗಿಡದ ಕಡ್ಡಿಯ ಪುಡಿ ಹಾಗೂ ಪೌಡರನ್ನು ಜಪ್ತಿ ಮಾಡಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ಕೆಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲವಾಡೆ ಆರೋಪ ಸಾಬಿತಾದ ಹಿನ್ನಲೆಯಲ್ಲಿ ಎನ್.ಡಿ.ಪಿ.ಎಸ್.ಕಾಯ್ದೆಯಡಿ 6 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ ದಂಡು ವಿಧಿಸಿ ದಿನಾಂಕ : 03-05-2023ರಂದು ತೀರ್ಪು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಅಬಕಾರಿ ಇನ್ಸಪೆಕ್ಟರ್ ಎಂ.ಎಚ್.ಪಡಸಲಗಿ ನಡೆಸಿ ಆಪಾದನೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಸ್.ಎಚ್.ಹಕೀಮ್ ಅವರು ವಾದ ಮಂಡಿಸಿದ್ದರು ಎಂದು ಪ್ರಧಾನ ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.