ಅಕ್ರಮಗಳ ಕೂಪ
ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಗಳ
ವಶಕ್ಕೆ:ಚನ್ನಬಸವಸ್ವಾಮಿ ಆಗ್ರಹ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.3: ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಶಾಲಾ, ಕಾಲೇಜುಗಳನ್ನು ಹೊಂದಿರುವ ಶ್ರೀ ಸಿದ್ದೇಶ್ವರ ವಿದ್ಯಾಸಂಸ್ಥೆಯ ಉಜ್ಜಯನಿ ಜಗದ್ಗುರು ಸಿದ್ದೇಶ್ವರ ವಿದ್ಯಾವರ್ಧಕ ಸಂಘ ಅಕ್ರಮದ ಕೂಪವಾಗಿದ್ದು ಸರ್ಕಾರ ಈ ಸಂಸ್ಥೆಯ ಶಾಲಾ ಕಾಲೇಜನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಶ್ರೀಸಿದ್ದೇಶ್ವರ ಅನುದಾನ ಪಡೆಯುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಆರ್.ಹೆಚ್.ಎಂ. ಚನ್ನಬಸವಸ್ವಾಮಿ ಆಗ್ರಹಿಸಿದ್ದಾರೆ.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಸಂಸ್ಥೆಯ ಶಾಲಾ ಕಾಲೇಜುಗಳ ಸಿಬ್ಬಂದಿಗೆ ಈ ವರೆಗೆ ನೇಮಕಾತಿ ಆದೇಶ ನೀಡದೆ. ಅವರನ್ನು ಅಗೌರವದಿಂದ ನಡೆಸಿಕೊಳ್ಳುತ್ತ ಕಿರುಕುಳ ನೀಡುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೇಮಕಾತಿ ಮಾಡಿಕೊಳ್ಳುತ್ತಾರೆ. ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.
ಈ ವರೆಗೆ ಶಿಕ್ಷಣ ಇಲಾಖೆಯಲ್ಲಿದ್ದ ಅಧಿಕಾರಿಗಳೆಲ್ಲ ಈತ ನೀಡುವ ಕೊಡುಗೆಯಿಂದ ಮಾಡಿದ್ದೆಲ್ಲವನ್ನು ಮನ್ನಿಸಿ ಹೋಗಿದ್ದಾರೆ. ಆದರೆ ಈಗ ಬಂದಿರುವ ಡಿ.ಡಿ.ಪಿ.ಐ ಅವರು ನಮ್ಮ ಮನವಿಗೆ ಸ್ಪಂದಿಸಿ ಈಗ ನಡೆಸಿರುವ 16 ಜನ ಸಿಬ್ಬಂದಿಯ ಅಕ್ರಮ ವರ್ಗಾವಣೆ ಬಗ್ಗೆ ನೋಟೀಸ್ ಜಾರಿ ಮಾಡಿ ಸಿಬ್ಬಂದಿ ನೇಮಕದ ಎಲ್ಲಾ ದಾಖಲಾತಿ ಸಲ್ಲಿಸುವಂತೆ ಕೋರಿದ್ದಾರೆ.
ಶಾಲೆಗಳು ಪ್ರಾರಂಭದಿಂದ ಇಲ್ಲಿಯವರೆಗೆ ಸಂಸ್ಥೆಯು ಪ್ರತಿ ವರ್ಷ ನೋಂದಣಾಧಿಕಾರಿಗಳಿಂದ ಪಡೆದ ನವೀಕರಣಗೊಂಡ ಹಾಗೂ ಸಂಸ್ಥೆಯ ಸದಸ್ಯರ ಪಟ್ಟಿಗೆ ನೋಂದಾಧಿಕಾರಿಗಳಿಂದ ಅನುಮೋದನೆ ಪಡೆದ ಆದೇಶ ಪ್ರತಿ, ಶಾಲೆಗಳು ಸಂಸ್ಥೆ ಹೆಸರಿಗೆ ರಿಜಿಸ್ಟರ್ ಆಗಿರುವ ದಾಖಲೆಗಳು, ನಿಮ್ಮ ಸಂಸ್ಥೆಗಳ ವಿರುದ್ಧ ದಾಖಲಾಗಿರುವ ನ್ಯಾಯಲಯ ಪ್ರಕರಣಗಳು ಮತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚಿನ ವರದಿಗಳು, ಕೆ. ಗೀತಾ ತಂದೆ ಕೆ. ಪರುಷೋತ್ತಮ ರೆಡ್ಡಿ ಅವರು ಸಹ ಶಿಕ್ಷಕಿಯಾಗಿ ನಿಮ್ಮ ಆಡಳಿತ ಮಂಡಳಿಯ ಅಧೀನದಲ್ಲಿ ನಡೆಯುತ್ತೀದ್ದ  ಶಾಲೆಗಳಲ್ಲಿ ಶಿಕ್ಷಕರ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ವೇತನ ಪಡೆಯುತ್ತಿದ್ದು ಈ ಕುರಿತ ದಾಖಲೆಗಳನ್ನು ಬರುವ ಹತ್ತು ದಿನದಲ್ಲಿ ಸಲ್ಲಿಸಿ ಎಂದು ಜು 28 ರಂದು ಆದೇಶ ಹೊರಡಿಸಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಾಪಗೌಡ, ಪಂಪಾಪತಿ ಇದ್ದರು.

Attachments area