ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ : ಹೆಳವರಹುಂಡಿ ಸೋಮು

ತಿ.ನರಸೀಪುರ, ನ.12: ಪುರಸಭೆಯಲ್ಲಿ ಅಕ್ರಮವಾಗಿ ಕೆಎಂಎಫ್ 24 ಹಾಗು ಅಕ್ರಮ ಖಾತೆ, ಪುರಸಭಾ ಆಸ್ತಿಯ ಒತ್ತುವರಿ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಪುರಸಭೆಯ ನೂತನ ಅಧ್ಯಕ್ಷ ಹೆಳವರಹುಂಡಿ ಸೋಮು ಹೇಳಿದರು.
ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುರಸಭೆಯಲ್ಲಿ ಈವರೆಗೆ ಆಗಿರುವ ಅಕ್ರಮಗಳ ಮಾಹಿತಿ ಲಭ್ಯವಾಗಿಲ್ಲ. ಆದರೆ ನಾನು ಅಧ್ಯಕ್ಷರಾದ ನಂತರ ಇಂತಹ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ. ಪುರಸಭೆಯಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದು ಅವರ ನಂಬಿಕೆಗೆ ಅರ್ಹವಾದ ಕೆಲಸಮಾಡುತ್ತೇನೆ.ಈಗಾಗಲೇ ಸಂಬಂಧಿಸಿದ ಪುರಸಭೆಯ ರಾಜ್ಯಸ್ವ ನಿರೀಕ್ಷಕರಿಗೆ ಪುರಸಭಾ ಆಸ್ತಿಯನ್ನು ಗುರುತಿಸುವಂತೆ ಆದೇಶದ ನೀಡಲಾಗಿದ್ದು ಆ ಜಾಗದಲ್ಲಿ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ. ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಪುರಸಭೆಯ ಆಸ್ತಿಯನ್ನು ದುರುಪಯೋಗವಾಗಲು ಬಿಡುವುದಿಲ್ಲ ಹಾಗು ಪುರಸಭೆಗೆ ಆದಾಯ ತರುವ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.
ಸ್ವಚ್ಚತೆ, ಕುಡಿಯುವ ನೀರು ಹಾಗು ಬೀದಿದೀಪ ಗಳಂತಹ ಮೂಲ ಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರತ್ಯೇಕವಾದ ಮಾರುಕಟ್ಟೆ ನಿರ್ಮಿಸಿಕೊಡಲು ಮಾರ್ಗೋಪಾಯಗಳ ಕುರಿತು ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು,ಬೀದಿ ನಾಯಿ ಹಾಗು ಬೀಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಆದ್ಯತೆ ನೀಡಲಾಗುವುದು ಎಂದರು. ಮೈಸೂರಿನ ದೇವರಾಜ ಮಾರುಕಟ್ಟೆ ಯ ಮಾದರಿಯಲ್ಲಿ ತರಕಾರಿ ವ್ಯಾಪಾರಸ್ಥರಿಗೆ ತುರುಕನಕಟ್ಟೆ ಸ್ಥಳದಲ್ಲಿ ಮಳಿಗೆ ನಿರ್ಮಿಸಿಕೊಡಲು ಸಾಧ್ಯತೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಕಾಲ ಕಲ್ಪಿಸಿಕೊಡಲಾಗುವುದೆಂದರು.
ಪರವಾನಗಿ ಪಡೆದುಕೊಳ್ಳಿ
ಪುರಸಭಾ ವ್ಯಾಪ್ತಿಯ ಬಹುತೇಕ ಅಂಗಡಿ ಮಾಲೀಕರು ವ್ಯಾಪಾರಸ್ಥರು ಲೈಸೆನ್ಸ್ ಪಡೆಯದೇ ಅಕ್ರಮವಾಗಿ ವಹಿವಾಟು ನಡೆಸುತ್ತಿದ್ದಾರೆ. ಪಟ್ಟಣದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಕೂಡಲೇ ಪರವಾನಗಿ ಪಡೆಯದ ಅಂಗಡಿ ಮಾಲೀಕರು ಲೈಸೆನ್ಸ್ ಮಾಡಿಸಿಕೊಳ್ಳಬೇಕು. ಆಮೂಲಕ ಪುರಸಭೆಗೆ ಆದಾಯ ಮೂಲಕ್ಕೆ ಅವರೂ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದರು.ಪುರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ದಾರರಾಗಿರುವವರು ಸುಮಾರು 2 ಕೋಟಿ ರೂ.ಗಳಷ್ಟು ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದು ತ್ವರಿತವಾಗಿ ಬಾಡಿಗೆ ಹಣ ಜಮಾ ಮಾಡಬೇಕು.ಕಟ್ಟಡ ಹಾಗು ಮನೆ ಮಾಲೀಕರು ಕಂದಾಯವನ್ನು ನಿಯಮಾನುಸಾರ ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ಉದ್ಯಾನವನ ನಿರ್ವಹಣೆಯಿಲ್ಲದೇ ಸೊರಗಿದೆ. ಖಾಸಗೀ ಕಂಪನಿ,ಬ್ಯಾಂಕ್,ಸಂಘ ಸಂಸ್ಥೆಗಳವರು ದತ್ತು ಪಡೆದು ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.ಒಟ್ಟಾರೆ ಪುರಸಭೆಯ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಮೂಲಕ ಮಾದರಿ ಪುರಸಭೆ ಮಾಡಬೇಕೆಂಬ ಅಭಿಲಾಷೆ ತಮ್ಮದಾಗಿದ್ದು ಪಟ್ಟಣದ ನಾಗರೀಕರು,ಸದಸ್ಯರು ಸಹಕರಿಸುವಂತೆ ಸೋಮು ಮನವಿ ಮಾಡಿದರು.