ಅಕ್ಯಾಡೆಮಿ, ಪ್ರಾಧಿಕಾರ ನೇಮಕಾತಿಗಳಲ್ಲಿ ಕಲ್ಯಾಣ ಕರ್ನಾಟಕದವರಿಗೆ ಪ್ರಾತಿನಿಧ್ಯ ಕೊಡಲು ಡಾ. ಸಬರದ್ ಆಗ್ರಹ

ಕಲಬುರಗಿ.ಜೂ 01: ನೂತನ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಕ್ಯಾಡೆಮಿ ಮತ್ತು ಪ್ರಾಧಿಕಾರಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ಕೊಡಬೇಕು ಹಾಗೂ ಈ ಭಾಗದ ಗಣ್ಯರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಡಾ. ಬಸವರಾಜ್ ಸಬರದ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಏಳು ಜಿಲ್ಲೆಗಳನ್ನು ಒಳಗೊಂಡಿದೆ. ಹಿಂದಿನಿಂದಲೂ ಇಂದಿನವರೆಗೂ ಶೋಷಣೆ ಒಳಗಾಗುತ್ತಲೇ ಬಂದಿದೆ. ಸಾಹಿತ್ಯಕವಾಗಿ, ಸಾಂಸ್ಕøತಿಕವಾಗಿ ತುಂಬಾ ಶ್ರೀಮಂತವಾಗಿರುವ ಈ ಪ್ರದೇಶವನ್ನು ಸರ್ಕಾರ ಮತ್ತು ಮೈಸೂರು-ಬೆಂಗಳೂರಿನ ವಿದ್ವಾಂಸರು ಅಲಕ್ಷ್ಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡದ ಮೊಟ್ಟ ಮೊದಲ ಕೃತಿ ಕವಿರಾಜಮಾರ್ಗ ಬಂದಿರುವುದು ಇದೇ ಪ್ರದೇಶದದಿಂದ ಕನ್ನಡದ ಮೊಟ್ಟಮೊದಲ ಕಥೆಗಳಾದ ವಡ್ಡಾರಾಧನೆಯು ಇಲ್ಲಿಯ ಪ್ರದೇಶದಾಗಿದೆ. ಕನ್ನಡ ಸಾಹಿತ್ಯದ ಕಣ್ಣುಗಳಂತಿರುವ ವಚನ ಸಾಹಿತ್ಯ-ದಾಸ ಸಾಹಿತ್ಯ-ತತ್ವಪದ ಸಾಹಿತ್ಯ ಸೂಫಿ ಸಾಹಿತ್ಯ ಈ ಪ್ರದೇಶದ ಮಹತ್ವದ ಸಾಹಿತ್ಯ ಕೊಡುಗೆಗಳಾಗಿವೆ. ಆಧುನಿಕ ಸಂದರ್ಭದಲ್ಲಿ ಕೂಡಾ ಈ ಪ್ರದೇಶ ಹಿಂದೆ ಬಿದ್ದಿಲ್ಲ, ರಾಜ್ಯಮಟ್ಟದ ಕಥಾ ಸ್ಪರ್ಧೆಗಳಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯಮಟ್ಟದ ಪ್ರಶಸ್ತಿ ಪಡೆದ ರಾಜ್ಯಮಟ್ಟದ ಸಾಹಿತಿಗಳು ಇಲ್ಲಿದ್ದಾರೆ. ಆದಾಗ್ಯೂ, ಆಳುವ ವ್ಯವಸ್ಥೆ ಕಳೆದ 75 ವರ್ಷಗಳಿಂದ ಪ್ರಾದೇಶಿಕ ನ್ಯಾಯ ಒದಗಿಸದೇ ಇಲ್ಲಿಯ ಸಾಹಿತಿ ಕಲಾವಿದರನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯದ ಮೇಲೆ ನಂಬಿಕೆ ಇಟ್ಟುಕೊಂಡ ಸರ್ಕಾರವಾಗಿದೆ. ಹೀಗಾಗಿ ಈ ಪ್ರದೇಶದ ಸಾಹಿತಿಗಳು, ಕಲಾವಿದರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಇದುವರೆಗೂ 75 ವರ್ಷಗಳ ಅವಧಿಯಲ್ಲಿ ಅಕ್ಯಾಡೆಮಿ ಪ್ರಾಧಿಕಾರ ಅಧ್ಯಕ್ಷರು, ಸದಸ್ಯರುಗಳ ಬೆರಳೆಣಿಕೆಯಷ್ಟು ನೇಮಕ ಮಾತ್ರ ಆಗಿದ್ದಾರೆ. ಆದುದ್ದರಿಂದ ಪ್ರಾದೇಶಿಕ ನ್ಯಾಯ ಮಾತ್ರ ಸಾಮಾಜಿಕ ನ್ಯಾಯ ಇವುಗಳನ್ನು ಪರಿಗಣಿಸಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪ್ರದೇಶದ ಸಾಹಿತಿಗಳನ್ನು ಅಧ್ಯಕ್ಷರನ್ನಾಗಿ, ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇಡಿ ಕರ್ನಾಟಕದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಡಿಯಲ್ಲಿ ನಡೆಯುವ 32 ಪ್ರತಿಷ್ಠಾನಗಳು ಕಲ್ಯಾಣ ಕರ್ನಾಟಕ ಹೊರಗಡೆ ಚಾಲ್ತಿಯಲ್ಲಿವೆ. ಕಳೆದ 50 ವರ್ಷಗಳಿಂದ ನಡೆಯುತ್ತಿವೆ ಆದಾಗ್ಯೂ, ಕಲ್ಯಾಣ ಕರ್ನಾಟಕದ ಪ್ರದೇಶದ ಒಂದೇ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿಲ್ಲ. ನಂಜುಂಡಪ್ಪ ವರದಿ ಹಾಗೂ 371ಜೆ ಕಲಂ ಅಡಿಯಲ್ಲಿ ಈ ಪ್ರದೇಶಕ್ಕೆ ಸಹಬೇಕಾಗಿರುವ ಪ್ರತಿಷ್ಠಾನವನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲಬುರ್ಗಿಯ ಬಿ. ಶ್ಯಾಮಸುಂದರ್ ಪ್ರತಿಷ್ಠಾನ, ಡಾ. ಚೆನ್ನಣ್ಣ ವಾಲೀಕಾರ್ ಪ್ರತಿಷ್ಠಾನ, ಬೀದರ್‍ನ ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ, ಕೊಪ್ಪಳ್‍ದ ಡಾ. ಸಿದ್ದಯ್ಯ ಪುರಾಣಿಕ್ ಪ್ರತಿಷ್ಠಾನ, ರಾಯಚೂರಿನ ಡಾ. ಶಾಂತರಸ ಪ್ರತಿಷ್ಠಾನ, ಯಾದಗಿರಿಯ ಮೋಟನಹಳ್ಳಿ ಹಸನಸಾಬ್ ಪ್ರತಿಷ್ಠಾನ, ಬಳ್ಳಾರಿ ಬೀಝಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ, ಆ ಪ್ರತಿಷ್ಠಾನಗಳಿಗೆ ಅದೇ ಪ್ರದೇಶದ ಸಾಹಿತಿಗಳು ಕವಿ-ಕಲಾವಿದರನ್ನು ನೇಮಕ ಮಾಡಬೇಕು. ಹಾಗೇ ಸದಸ್ಯರನ್ನು ಸಹ ಆ ಪ್ರದೇಶದವರನ್ನು ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ವಿಶ್ವವಿದ್ಯಾಲಯಗಳಿಗೆ ಇಲ್ಲಿಯ ವಿದ್ವಾಂಸರನ್ನು ಮತ್ತು ಶಿಕ್ಷಣ ತಜ್ಞರನ್ನು ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಬೇಕೆಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿಗಳಾದ ಡಾ. ಗವಿಸಿದ್ದಪ್ಪ ಪಾಟೀಲ್, ಶಿವರಾಜ್ ಪಾಟೀಲ್, ಡಾ. ಸುನೀಲ್ ಜಾಬಾದಿ ಮುಂತಾದವರು ಉಪಸ್ಥಿತರಿದ್ದರು.