ಅಕ್ಟೋಬರ್ 2 ರಂದು ಕಿಸಾನ್ ಸ್ವರಾಜ್ ಯಾತ್ರೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ6: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿಕಾಯ್ದೆಗಳನ್ನು ವಿರೋಧಿಸಿ ಅಕ್ಟೋಬರ್ 2ರಂದು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಕಿಸಾನ್ ಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ನಗರದ ರೈತ ಭವನದಲ್ಲಿ ಭಾನುವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಲ್ಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬರೀ ಉತ್ತರ ಭಾರತದ ರೈತರ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ಆದರೆ, ಈ ಹೋರಾಟ ಸಮಗ್ರ ಭಾರತದ ಹೋರಾಟವಾಗಿದೆ. ಹೀಗಾಗಿ ಕನ್ಯಾಕುಮಾರಿಯಿಂದ ದಿಲ್ಲಿವರೆಗೆ ಕಿಸಾನ್ ಸ್ವರಾಜ್ ಯಾತ್ರೆ ನಡೆಯಲಿದೆ ಎಂದರು.
ಕೇಂದ್ರ ಸರ್ಕಾರ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತಿಲ್ಲ. ಆದರೆ, ಕಣ್ಣೊರೆಸುವ ತಂತ್ರದ ಭಾಗವಾಗಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ನಿಗದಿ ಮಾಡಿದೆ. ಇದನ್ನು ಕಾನೂನಿನ ಚೌಕಟ್ಟಿನಲ್ಲಿ ತರಬೇಕು. ಈ ಮೂಲಕ ಎಲ್ಲಾ ರೈತರಿಗೂ ಎಂಎಸ್‍ಪಿ ಲಾಭ ದೊರೆಯಬೇಕು ಎಂದರು.
ಕೇಂದ್ರ ಸರ್ಕಾರ ಕಾರ್ಪೋರೇಟ್‍ಗಳ ಹಿತ ಕಾಪಾಡುತ್ತಿದೆ. ದಿಲ್ಲಿಯಲ್ಲಿ 9 ತಿಂಗಳಿನಿಂದ ರೈತರು ಹೋರಾಟ ಮಾಡುತ್ತಿದ್ದರೂ ಕಡೆಗಣಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು ಸುದೀರ್ಘ ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲೇ ರೈತರ ಹೋರಾಟ ಕೂಡ ಸುದೀರ್ಘವಾಗಿ ನಡೆಯಲಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತುಂಬಿದೆ. ಹೀಗಿದ್ದರೂ ಸರ್ಕಾರ ಮಾತ್ರ ನವಲಿ ಜಲಾಶಯ ನಿರ್ಮಾಣ ಮಾಡಲಾಗುವುದು ಎಂದು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಜಲಾಶಯದಲ್ಲಿನ ಹೂಳನ್ನು ರೈತರ ಟ್ರ್ಯಾಕ್ಟರ್ ಬಳಸಿ ಗೊಬ್ಬರದ ರೂಪದಲ್ಲಿ ರೈತರ ಗದ್ದೆಗಳಲ್ಲಿ ಹಾಕಿದರೆ ಸಾಕು. 60 ಸಾವಿರ ಎಕರೆ ಪ್ರದೇಶ ಬೇಕು ಎಂದು ಸರಕಾರ ಹೇಳುತ್ತಿದೆ. ರೈತರು 120 ಸಾವಿರ ಎಕರೆ ನೀಡಲು ಸಿದ್ಧವಾಗಿದ್ದಾರೆ. ಡ್ಯಾಂ ಸಂರಕ್ಷಣೆಯಲ್ಲಿ ರೈತರು ತೊಡಗಲಿದ್ದಾರೆ. ಟ್ರ್ಯಾಕ್ಟರ್‍ಗಳಿಗೆ ಬರೀ ಡೀಸೆಲ್ ಹಾಕಿಸಿದರೆ ಸಾಕು. ನೀರಾವರಿ ಸಲಹಾ ಸಮಿತಿ ಬರೀ ನೀರು ಬಿಡುವ ದಿನಾಂಕ ನಿಗದಿ ಮಾಡುವ ಸಮಿತಿಯಾಗಿದೆ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಕೇಂದ್ರ ತೀರ್ಮಾನ ತೆಗೆದುಕೊಂಡರೂ ರಾಜ್ಯ ಸರ್ಕಾರಗಳು ನಪುಂಸಕತೆ ಪ್ರದರ್ಶಿಸುತ್ತಿವೆ. ನೀರಾವರಿ, ಕೃಷಿ, ಮಾರುಕಟ್ಟೆ, ವಿದ್ಯುತ್ ವಿಷಯಗಳು ರಾಜ್ಯಪಟ್ಟಿಗೆ ಬರುತ್ತಿವೆ. ಹೀಗಿದ್ದರೂ ಕೇಂದ್ರದ ಎದುರು ರಾಜ್ಯಗಳು ಮೌನವಾಗಿವೆ ಎಂದರು.
ರೈತ ಮುಖಂಡ ಜೆ.ಎಂ. ವೀರಸಂಗಯ್ಯ , ಮುಖಂಡರಾದ ಹುಲ್ಲೆನೂರು ಶಂಕ್ರಪ್ಪ, ಸಾಲೋನಿ ಮರಿಸ್ವಾಮಿ, ಗೌಸಿಯಾ ಖಾನ್, ಗಂಟೆ ಸೋಮು, ಗೋಣಿ ಬಸಪ್ಪ ಇತರರು ಪಾಲ್ಗೊಂಡಿದ್ದರು.
.