ಧಾರವಾಡ, ಜೂ೨೬: ಸದ್ಯ ಕೊಡುತ್ತಿರುವ ಪಡಿತರ ಅಕ್ಕಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದಲ್ಲ, ಅದು ಯು.ಪಿ.ಎ. ಅಕ್ಕಿ ಎಂದು ರಾಜ್ಯ ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ತಂದಿದ್ದೇವೆ, ದೇಶದಲ್ಲಿ ಈ ಕಾಯ್ದೆ ಮೂಲಕ ಐದು ಕೆ.ಜಿ. ಅಕ್ಕಿ ಕೊಟ್ಟಿದ್ದೇವೆ. ಅದು ಮೋದಿ ಕೊಡುತ್ತಿರುವ ಅಕ್ಕಿ ಅಲ್ಲ ಎಂದು ಖಡಾಖಂಡಿತವಾಗಿ ನುಡಿದರು.
೧೦ ಕೆ.ಜಿ. ಅಕ್ಕಿ ಕೊಡುತ್ತೇವೆಂದು ನಾವು ಹೇಳಿದ್ದು ಕೇಂದ್ರದ ೫ ಕೆಜಿಗೆ ನಾವು ೫ ಕೆಜಿ ಸೇರಿಸಿ ಒಟ್ಟು ೧೦ ಕೆಜಿ ಎಂದು, ಅದರಂತೆ ೧೦ ಕೆಜಿ ಕೊಟ್ಟೇಕೊಡುತ್ತೇವೆ ಎಂದು ಲಾಡ್ ತಿಳಿಸಿದರು.ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾಷಣ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಸಿದ್ಧರಾಮಯ್ಯ ಅಂದರೆ ಚಾಂಪಿಯನ್ ಎಂದು ಹೊಗಳಿದ ಸಚಿವರು, ಸಿದ್ಧರಾಮಯ್ಯನವರ ಜನಪ್ರಿಯತೆ ಹೆಚ್ಚಾಗುತ್ತಿದೆ ಮಹಾರಾಷ್ಟ್ರ ಅಷ್ಟೇಅಲ್ಲ ತಮಿಳ್ನಾಡಿಗೂ ಹೋಗಿ ಬಂದಿದ್ದಾರೆ ಎಂದು ನುಡಿದರು.
ನಾಳೆ ಧಾರವಾಡ ರೈಲು ನಿಲ್ದಾಣವನ್ನು ಪ್ರಧಾನಿ ಮೋದಿಯವರು ವರ್ಚ್ಯುವಲ್ ಮೂಲಕ ಉದ್ಘಾಟಿಸುತ್ತಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ತಮಗೆ ಆಹ್ವಾನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ರಾಷ್ಟ್ರಪತಿಗಳನ್ನೇ ಸೇರಿಸಿಕೊಳ್ಳುವುದಿಲ್ಲ, ಇನ್ನು ನಮ್ಮದೇನು? ಇದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ಹೊರಹಾಕಿದರು.