ಬೆಂಗಳೂರು,ಜೂ.೨೨:ಅಕ್ಕಿ ವಿತರಣೆಯಲ್ಲಿ ರಾಜಕೀಯ ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ದೆಹಲಿಗೆ ಆಗಮಿಸಿ ರಾಷ್ಟ್ರಪತಿ ದ್ರೌಪದಿಮುರ್ಮು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿದ್ದರು. ಇಂದು ಬೆಳಿಗ್ಗೆ ಬೆಂಗಳೂರಿಗೆ ಹೊರಡುವ ಮುನ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಕ್ಕಿ ವಿತರಣೆ ಬಗ್ಗೆ ರಾಜಕೀಯ ಅಥವಾ ದ್ವೇಷದ ರಾಜಕಾರಣ ಬೇಡ ಎಂದು ತಿಳಿಸಿದ್ದೇನೆ ಎಂದರು.ಭಾರತ ಆಹಾರ ನಿಗಮದ ವಿಭಾಗೀಯ ಅಧಿಕಾರಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಒಪ್ಪಿಗೆ ಪತ್ರವನ್ನು ನೀಡಿ ಮರುದಿನವೇ ಅಕ್ಕಿ ವಿತರಣೆಯನ್ನು ರಾಜ್ಯಗಳಿಗೆ ಸ್ಥಗಿತಗೊಳಿಸಿರುವ ವಿಚಾರವನ್ನೂ ಅಮಿತ್ ಶಾರವರ ಗಮನಕ್ಕೆ ತಂದಿದ್ದೇನೆ ಎಂದರು.ಕೇಂದ್ರ ಸಚಿವ ಅಮಿತ್ ಶಾರವರು ತಮ್ಮ ಮಾತುಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಸಂಬಂಧಪಟ್ಟ ಮಂತ್ರಿಗಳೊಂದಿಗೆ ಮಾತನಾಡುವ ಭರವಸೆಯನ್ನು ನೀಡಿದ್ದಾರೆ ಎಂದರು.ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆಯೂ ಈ ಭೇಟಿ ಸಂದರ್ಭದಲ್ಲಿ ಚರ್ಚೆಗಳಾಗಿವೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಎರಡು ಐಆರ್‌ಪಿ ಬೆಟಾಲಿಯನ್‌ನ್ನು ಒದಗಿಸಿದ್ದು, ಇನ್ನು ಎರಡು ಬೆಟಾಲಿಯನ್‌ನ್ನು ನೀಡುವಂತೆ ಕೋರಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಕ್ಕಿಗೆ ಸತತ ಪ್ರಯತ್ನ
ಅನ್ನಭಾಗ್ಯ ಯೋಜನೆಯಡಿ ಪ್ರತಿವ್ಯಕ್ತಿಗೆ ೧೦ ಕೆಜಿಯಂತೆ ಅಕ್ಕಿ ವಿತರಿಸುವ ಗ್ಯಾರಂಟಿ ಅನುಷ್ಠಾನಕ್ಕೆ ಅಕ್ಕಿ ಹೊಂದಿಸಲು ರಾಜ್ಯಸರ್ಕಾರ ಪ್ರಯತ್ನ ನಡೆಸಿದ್ದು, ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನವನ್ನು ಮುಂದುವರೆಸಿದೆ.ಭಾರತ ಆಹಾರ ನಿಗಮದಿಂದ ಅಕ್ಕಿ ಪಡೆಯಲು ಪ್ರಯತ್ನ ಮುಂದುವರೆಸಿದೆಯಾದರೂ ಕೇಂದ್ರದ ಅಸಹಕಾರದಿಂದ ರಾಜ್ಯಸರ್ಕಾರಕ್ಕೆ ಈ ವಿಚಾರದಲ್ಲಿ ಯಶಸ್ಸು ಸಿಕ್ಕಿಲ್ಲ. ಹಾಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ನಿನ್ನೆ ದೆಹಲಿಗೆ ತೆರಳಿ ಅಮಿತ್ ಶಾರವರನ್ನು ಭೇಟಿ ಮಾಡಿದ್ದರು. ಆದರೆ, ಆಹಾರ ಸಚಿವರನ್ನು ಭೇಟಿ ಮಾಡಲು ಕೆ.ಎಚ್ ಮುನಿಯಪ್ಪರವರು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಕೆ.ಎಚ್ ಮುನಿಯಪ್ಪರವರ ಭೇಟಿಗೆ ಸಮಯ ನೀಡಿಲ್ಲ. ಈ ಬಗ್ಗೆ ನಿನ್ನೆ ದೆಹಲಿಯಲ್ಲಿ ಕೆ.ಎಚ್ ಮುನಿಯಪ್ಪರವರು ಕೇಂದ್ರ ಆಹಾರ ಸಚಿವರ ಭೇಟಿಗೆ ಅವಕಾಶವೇ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ರಾಜ್ಯಸರ್ಕಾರಕ್ಕೆ ನಿಗದಿತ ಅವಧಿಯಲ್ಲಿ ಅಕ್ಕಿ ಪೂರೈಕೆಯಾಗದಿದ್ದರೆ ೧೦ ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಯಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆಗಳಿವೆ. ಏನೇ ಆದರೂ ೧೦ ಕೆಜಿ ಅಕ್ಕಿ ಕೊಡುವ ಬದ್ಧತೆ ತಮ್ಮದು, ನುಡಿದಂತೆ ನಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ನಿಶ್ಚಿತವಾಗಿ ಆಗಲಿದೆ. ಆದರೆ ತುಸು ವಿಳಂಬವಾಗಬಹುದು ಅಷ್ಟೆ.