‘ಅಕ್ಕಿ’ ಕೈ ಕಮಲ ವಾಕ್ಸ್‌ಮರ

ಬೆಂಗಳೂರು, ಜೂ. ೧೫- ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಪದಲ್ಲಿ ಹುರುಳಿಲ್ಲ. ಅಕ್ಕಿ ಸರಬರಾಜು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಎಲ್ಲ ರಾಜ್ಯಗಳಿಗೂ ಪ್ರತಿ ವ್ಯಕ್ತಿಗೆ ೫ ಕೆ.ಜಿ. ಅಕ್ಕಿಯನ್ನು ನೀಡುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೦ ಕೆ,ಜಿ. ಅಕ್ಕಿ ಕೊಡುತ್ತೇನೆ ಎಂದು ಹೇಳುತ್ತಾರೆ. ಅದರಲ್ಲಿ ೫ ಕೆ.ಜಿ. ಕೇಂದ್ರ ಸರ್ಕಾರ ಕೊಡುತ್ತದೆ. ಈ ಹಿಂದೆ ಡಿಸೆಂಬರ್‌ನಲ್ಲಿ ೧ ಕೆ.ಜಿ. ಅಕ್ಕಿ ಕಡಿಮೆಯಾದಾಗ ನಾವು ಹಣ ಕೊಟ್ಟು ಖರೀದಿಸಿದ್ದೆವು. ಅದು ಮಾರ್ಚ್ ವರೆಗೆ ಮಾತ್ರ ಅವಕಾಶ ಇದೆ. ಮುಂದೆ ಆಹಾರ ಭಂಡಾರ ಅಥವಾ ಬೇರೆ ಏಜೆನ್ಸಿ ಮೂಲಕ ಖರೀದಿ ಮಾಡಬೇಕು ಎಂದು ನಾನು ಕಡತದಲ್ಲಿ ಬರೆದಿದ್ದೇನೆ. ಆದರೆ ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡುವ ಸಂದರ್ಭದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಸಿದೆ ಎಂದು ಹೇಳಿದರು.
ಅಕ್ಕಿ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಇಲ್ಲವೇ ಕೇಂದ್ರಕ್ಕೆ ಪತ್ರ ಬರೆದು ಕೇಂದ್ರ ಸಚಿವರ ಜತೆಯೂ ಚರ್ಚೆ ಮಾಡಬಹುದಿತ್ತು. ಅದು ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.
ಜನರಿಗೆ ಭರವಸೆ ಕೊಟ್ಟಂತೆ ಜುಲೈ ೧ ರಿಂದ ಕಾಂಗ್ರೆಸ್ ಸರ್ಕಾರ ೧೦ ಕೆ.ಜಿ. ಅಕ್ಕಿ ಕೊಡಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ನಡೆಸುತ್ತದೆ. ಅಕ್ಕಿಯನ್ನು ಬೇರೆ ಏಜೆನ್ಸಿಗಳ ಮೂಲಕ ಖರೀದಿ ಮಾಡಿ ನೀಡಬೇಕು. ಇಲ್ಲದಿದ್ದರೆ ಜನರ ಖಾತೆಗೆ ಹಣವನ್ನಾದರೂ ವರ್ಗಾವಣೆ ಮಾಡಲಿ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಅಕ್ಕಿ ಕೊಡುವುದಾಗಿ ತೀರ್ಮಾನ ಮಾಡುವುದಾಗಿ ಹೇಳಿದೆ. ಇದುವರೆಗೂ ಮಳೆ ಸರಿಯಾಗಿ ಆಗದಿರುವುದರಿಂದ ಮುಂದಿನ ದಿನಗಳಲ್ಲಿ ಆಹಾರ ಕೊರತೆಯಾಗಬಾರದು ಎಂದು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸಿ ಈ ರೀತಿಯ ತೀರ್ಮಾನ ಮಾಡಿದೆ. ಯೋಜನೆ ಜಾರಿ ವಿಚಾರದಲ್ಲಿ ಸಿದ್ದರಾಮಯ್ಯನವರು ಕೇಂದ್ರದ ಜತೆ ಮಾತನಾಡದೆ ಕೇವಲ ೧ ತಿಂಗಳು ಪ್ರಚಾರ ಮಾಡುತ್ತಾ ಕಾಲಹರಣ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ವಿದ್ಯುತ್ ದರ ಪರಿಷ್ಕರಣೆಯನ್ನು ಕೆಇಆರ್‌ಸಿ ಮಾಡುತ್ತದೆ. ಮೇ ೧೨ಕ್ಕೆ ಕೆಇಆರ್‌ಸಿ ನೋಟಿಫಿಕೇಷನ್ ಮಾಡಿದೆ. ಜೂನ್ ೨ ರಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ದರ ಏರಿಕೆಯನ್ನು ತಡೆಯಬಹುದಿತ್ತು. ತನ್ನ ಲೋಪ ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಮಾರ್ಚ್ ತಿಂಗಳಲ್ಲಿ ದರ ಪರಿಷ್ಕರಣೆ ಬಂದಾಗ ನಾವು ರಾಜ್ಯ ಸರ್ಕಾರದಿಂದಲೇ ಭರಿಸುವುದಾಗಿ ಹೇಳಿದ್ದೆವು ಎಂದರು.
ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಹಣ ನೀಡುವುದು ಆಗುವುದಿಲ್ಲ ಎಂಬುದು ವಾಸ್ತವ. ಸಾರಿಗೆ ನಿಗಮಗಳಿಗೆ ಪೆಟ್ರೋಲ್ ಬಾಕಿ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ ಹಣಕಾಸು ವ್ಯವಸ್ಥೆ ಮಾಡಿಕೊಳ್ಳದೆ ಯೋಜನೆ ಜಾರಿಯ ಘೋಷಣೆ ಮಾಡಿದ್ದಾರೆ. ಈ ಯೋಜನೆ ಮುಂದುವರೆಯುವುದಿಲ್ಲ. ಫ್ರೀ ಬಸ್ ಯೋಜನೆ ಜನರನ್ನು ವಂಚಿಸುವ ಕೆಲಸವಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.
ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳಿಗೆ ೫೯ ಸಾವಿರ ಕೋಟಿ ಆಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಅದು ಸುಮಾರು ೯೦ ಸಾವಿರ ಕೋಟಿ ಆಗುತ್ತದೆ ಎಂಬುದು ತಮ್ಮ ಲೆಕ್ಕಾಚಾರ ಎಂದು ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ನಾಯಕರ ಜತೆ ನಾನು ಯಾವುದೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿ, ಶಾಮನೂರು ಶಿವಶಂಕರಪ್ಪನವರು ನಮ್ಮ ಬೀಗರು. ಹಾಗಾಗಿ ಅವರ ಜತೆ ಊಟಕ್ಕೆ ಹೋಗಿದ್ದೇನೆ. ಅದಕ್ಕೆ ನಾನಾ ಅರ್ಥ ಕಲ್ಪಿಸುವುದು ಸರಿಯಲ್ಲ. ನಾನು ಮಾಜಿ ಪ್ರಧಾನಿ ದೇವೇಗೌಡರ ಮನೆಗೂ ಹೋಗಿದ್ದೇನೆ, ಎಸ್.ಎಂ. ಕೃಷ್ಣ ಅವರ ಮನೆಗೂ ಹೋಗಿದ್ದೇನೆ. ದೇಶಪಾಂಡೆ ಅವರ ಮನೆಗೂ ಹೋಗಿದ್ದೇನೆ. ಇದರಲ್ಲಿ ತಪ್ಪೇನಿದೆ. ಬೇರೆ ಪಕ್ಷಗಳ ನಾಯಕರ ಜತೆ ಸ್ನೇಹ ಇದೆ. ಸಾಮಾಜಿಕ ಸಂಬಂಧಗಳಿಗೂ, ಸ್ನೇಹಕ್ಕೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.