ಅಕ್ಕಿಗೆ ಕೊಕ್ ಕೇಂದ್ರದ ವಿರುದ್ಧ ಮಂತ್ರಿಗಳ ಆಕ್ರೋಶ

ಬೆಂಗಳೂರು, ಜೂ. ೧೫- ಪಡಿತರ ವ್ಯವಸ್ಥೆಯ ಅನ್ನಭಾಗ್ಯ ಯೋಜನೆಯಡಿ ೧೦ ಕೆ.ಜಿ. ಅಕ್ಕಿ ವಿತರಿಸಲು ಅಕ್ಕಿ ನೀಡಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ ಬೆನ್ನಲ್ಲೆ ರಾಜ್ಯದ ಹಲವು ಸಚಿವರುಗಳು ಸಹ ಕೇಂದ್ರದ ನಿಲುವನ್ನು ಖಂಡಿಸಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರ ರಾಮಲಿಂಗಾರೆಡ್ಡಿ ಅವರು, ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇದೆ. ಆದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳಿದೆ ಎಂದು ದೂರಿದರು.ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತದೆ ಎಂಬ ಭಯ ಬಿಜೆಪಿ ನಾಯಕರಿಗೆ ಇದೆ. ಹಾಗಾಗಿ ಅಕ್ಕಿ ಕೊಡದಿರುವ ತೀರ್ಮಾನ ಮಾಡಿದ್ದಾರೆ. ಇದು ಸರಿಯಲ್ಲ. ನಾವು ಕೇಂದ್ರ ಸರ್ಕಾರವನ್ನು ಕೇಳದೆ ಯಾರನ್ನು ಕೇಳಬೇಕು, ರಾಜ್ಯ ಬಿಜೆಪಿ ನಾಯಕರು ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಒತ್ತಡ ಹೇರಲಿ ಎಂದು ಅವರು ಹೇಳಿದರು.
ಪ್ರಿಯಾಂಕ ಖರ್ಗೆ ಹೇಳಿಕೆ
ಕೇಂದ್ರ ಸರ್ಕಾರ ದುರುದ್ದೇಶದಿಂದ ಅಕ್ಕಿ ಕೊಡುತ್ತಿಲ್ಲ. ಇದು ಸರಿಯಲ್ಲ. ದುಡ್ಡು ಕೊಟ್ಟರೂ ಕೊಡಲ್ಲ ಎಂದರೆ ಹೇಗೆ, ದುಡಿಯುವ ಕೈಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹರಿಹಾಯ್ದರು.
ನಾವು ಸುಮ್ಮನೆ ಕುಳಿತಿಲ್ಲ. ಬೇರೆ ರಾಜ್ಯಗಳಿಂದ ಖಾಸಗಿಯಾಗಿ ತೆಗೆದುಕೊಂಡು ಅಕ್ಕಿ ನೀಡುತ್ತೇವೆ. ನಾವೇನು ಕೇಂದ್ರದಿಂದ ಪುಕ್ಸಟ್ಟೆ ಅಕ್ಕಿ ಕೊಡಿ ಎಂದು ಕೇಳುತ್ತಿಲ್ಲ. ದುಡ್ಡು ಕೊಟ್ಟರೂ ಅಕ್ಕಿ ಕೊಡಲು ತಯಾರಿಲ್ಲ ಎಂದು ಹರಿಹಾಯ್ದರು.
ಕೆ.ಜೆ. ಜಾರ್ಜ್ ಹೇಳಿಕೆ
ಬಡವರಿಗೆ ಸಹಾಯ ಮಾಡುವ ವಿಚಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಅಕ್ಕಿ ಕೊಡದಿರುವ ಅವರ ಧೋರಣೆ ಅವರು ಯಾರ ಪರ ಇದ್ದಾರೆ ಎಂಬುದನ್ನು ತೋರಿಸುತ್ತದೆ. ನಾವು ಪುಕ್ಸಟ್ಟೆ ಕೊಡಿ ಎಂದು ಕೇಳಿಲ್ಲ. ನಾವು ಹಣ ಕೊಡುತ್ತಿರುವಾಗ ಅವರು ಅಕ್ಕಿ ಕೊಡಬಹುದಿತ್ತು ಎಂದು ಇಂಧನ ಸಚಿವ ಕೆ.ಜಿ. ಜಾರ್ಜ್ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.