ಅಕ್ಕಲಕೋಟೆ ಬಳಿ ಭೀಕರ ಅಪಘಾತ; ಆಳಂದದ ಮಹಿಳೆ, ಮಗು ಸೇರಿ 6 ಸಾವು

ಕಲಬುರಗಿ,ಜೂ.30: ಆಳಂದ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳ ವಾಡಿ ಹೊರ ವಲಯದಲ್ಲಿ ಕ್ರೂಸರ್ ಮತ್ತು ಸಿಮೆಂಟ್ ಟ್ಯಾಂಕರ ಮಧ್ಯೆ ಡಿಕ್ಕಿ ಸಂಭವಿಸಿ ಆಳಂದ ತಾಲೂಕಿನ ಅಣೂರು ಗ್ರಾಮದ ೬ ಜನರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಮೃತ ಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರು ಎಂದು ಗೊತ್ತಾಗಿದೆ. ಕ್ರೂಸರ್ ವಾಹನದಲ್ಲಿ ಅಫಜಲಪುರ ತಾಲೂಕಿನ ಘತ್ತರಗಿ ದರ್ಶನ ಮುಗಿಸಿಕೊಂಡು, ಅಕ್ಕಲಕೋಟೆಯ ಸ್ವಾಮಿ ಸಮರ್ಥ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಈ ದುರುಂತ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಇದ್ದರೆಂದು ಗೊತ್ತಾಗಿದೆ. ಸತ್ತವರಲ್ಲಿ ೫ ಜನ ಮಹಿಳೆಯರು ಹಾಗೂ ಒಂದು ಮಗುಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಗ್ರಾಮಸ್ಥರ ಮಾಹಿತಿಯೂ ಕಲೆ ಹಾಕಲಾಗುತ್ತಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವೂ ನಡೆದಿದೆ ಎಂದು ಆಳಂದ ಸಿಪಿಐ ಮಹಾದೇವ ಪಂಚಮುಖಿ ಹಾಗೂ ಡಿವೈಎಸ್ ಪಿ ತಿಳಿಸಿದ್ದಾರೆ.