ಅಕ್ಕರೆಯಿಂದ ಸಕ್ಕರೆ ಗೊಂಬೆ ಬೆಳಗಿದ ಪುಟ್ಟ ಬಾಲೆಯರು

ಸಂಡೂರು:ನ:2: ಸಣ್ಣ ಗೌರಿ ಹುಣ್ಣಿಮೆಯನ್ನು ಪಟ್ಟಣದಲ್ಲಿ ಸಕ್ಕರೆಯ ಅಂದದ ಗೊಂಬೆಗಳನ್ನು ಮಕ್ಕಳು, ಮಹಿಳೆಯರು ಬೆಳಗುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿಯ ಜೋಗಿ ಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸಿದ ಪಾರ್ವತಿ, ಪರಮೇಶ್ವರ ಮೂರ್ತಿಯಲ್ಲಿ ಪಾರ್ವತಿಯ ಅಲಂಕಾರ ಮೂರ್ತಿಗೆ ಭಕ್ತರು ಅಲಂಕಾರ ಮಾಡಿ ಸಿಂಗರಿಸಿದ್ದರು, ಅಲ್ಲದೆ ಬೆಳಗಿನಿಂದಲೇ ಸಿಂಗಾರ ಗೊಂಡ ಮೂರ್ತಿಗಳಿಗೆ ಸಂಜೆಯಾಗುತ್ತಿದ್ದಂತೆ ಭಕ್ತರು ಸಕ್ಕರೆಯ ಅಂದದ, ಬಣ್ಣ ಬಣ್ಣದ ಗೊಂಬೆಗಳನ್ನು ಅಲಂಕಾರ ಮಾಡಿಕೊಂಡು, ನೂತನ ಸೀರೆಗಳನ್ನು ಹುಟ್ಟುಕೊಂಡು ಬಂದ ಯುವತಿಯರು, ತಾಯಂದಿರು ತಮ್ಮ ಪುಟ್ಟ ಕಂದಮ್ಮಗಳಿಗೆ ಸೀರೆಗಳನ್ನು ಹಾಕಿ, ಉದ್ದನೆಯ ಜಡೆಯೊಂದಿಗೆ, ಅಂದದ ಅರತಿ ತಟ್ಟೆಯನ್ನು ಸಿಂಗಾರ ಮಾಡಿಕೊಂಡು ದೀಪಗಳನ್ನು ಹಚ್ಚಿಕೊಂಡು ದೇವಸ್ಥಾನಕ್ಕೆ ತೆರಳುತ್ತಿರುವುದನ್ನು ನೋಡಲು ಬಹು ಸುಂದರವಾಗಿ ಕಾಣುತ್ತಿತ್ತು.
ದೇವಸ್ಥಾನದಲ್ಲಿ ವಿವಿಧ ರೀತಿಯ ಕಡ್ಲೆ ಬತ್ತಿಗಳನ್ನು ಹಚ್ಚಿ ದೇವಿಗೆ ಬೆಳಗಿ, ತಮ್ಮ ಅಲಂಕಾರಿಕ ತಟ್ಟೆಯಲ್ಲಿಯ ಚಂದದ ಗೊಂಬೆಗಳನ್ನು ದೇವಿಯ ಮುಂದೆ ಇಟ್ಟು ಪೂಜಿಸಿದರೆ, ಮತ್ತೆ ಕೆಲವರು ಅದರ ಜೊತೆಯಲ್ಲಿ ಅಕ್ಕಿ, ಬೆಳೆ, ಬೆಲ್ಲ, ಬಳೆಗಳನ್ನು ಅರ್ಪಿಸಿದರು, ಮತ್ತೆ ಕೆಲವರು ಸಕ್ಕರೆಯ ಗೊಂಬೆಗಳನ್ನು ಅರ್ಪಿಸಿದರು, ಎಲ್ಲರೂ ಸಾಮೂಹಿಕವಾಗಿ ಬೆಳಗಿ ಬಹು ಭಕ್ತಿಯಿಂದ ದೇವಿಗೆ ಪ್ರಾರ್ಥಿಸಿದರು.
ಪಟ್ಟಣದಲ್ಲಿ ಪ್ರಮುಖವಾಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ, ಜೋಗಿ ಲಿಂಗೇಶ್ವರ ದೇವಸ್ಥಾನದಲ್ಲಿ, ತಾಯಮ್ಮನ ಗುಡಿಯಲ್ಲಿ, ಹೀಗೆ ಪಟ್ಟಣದ ಹಲವಾರು ಕಡೆಗಳಲ್ಲಿ ಸ್ಥಾಪಿತವಾದ ಗೌರಮ್ಮನಿಗೆ ಭಕ್ತಿಯಿಂದ ಅರತಿಯನ್ನು ಬೆಳಗಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.