
ಭಾಲ್ಕಿ:ಎ.7: ಕನ್ನಡದ ಮೊದಲ ವಚನಗಾರ್ತಿ ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿ ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಚನ್ನಬಸವಾಶ್ರಮ ಪರಿಸರದ ಡಾ.ಚನ್ನಬಸವ ಪಟ್ಟದ್ದೇವರ ಗದ್ದುಗೆಯ ಬಲಭಾಗದಲ್ಲಿರುವ ಅಕ್ಕಮಹಾದೇವಿ ವೃತದಲ್ಲಿ ಜಯಂತಿ ನಿಮಿತ್ತ ಗುರುವಾರ ಶಾಸಕ ಈಶ್ವರ ಖಂಡ್ರೆ ಅವರು ಪುತ್ಥಳಿಗೆ ಮಾಲಾರ್ಪಣೆ, ಪುಷ್ಪವೃಷ್ಟಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, 12ನೆಯ ಶತನಮಾನದಲ್ಲಿ ಅಕ್ಕಮಹಾದೇವಿ ಅವರು ಸಮ ಸಮಾಜ, ಮಹಿಳೆಯರ ಸ್ವತಂತ್ರಕ್ಕಾಗಿ ನಡೆಸಿದ ಸಂಘರ್ಷ ಮತ್ತು ತ್ಯಾಗಮಯ ಬದುಕು ಎಲ್ಲರಿಗೂ ಮಾದರಿಯಾಗಿದೆ. ಅವರ ಒಂದೊಂದು ವಚನಗಳಲ್ಲಿ ಬದುಕಿನ ಮೌಲ್ಯ ಅಡಗಿವೆ. ಜೀವನದಲ್ಲಿ ಎಷ್ಟೇ ಕಷ್ಟ, ಸಮಸ್ಯೆಗಳು ಬಂದರೂ ಎದೆಗುಂದದೇ ದೈರ್ಯದಿಂದ ಎದುರಿಸಿ ಮಹಿಳಾ ಕೂಲದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದರು.
ಅಕ್ಕಮಹಾದೇವಿ ಅವರು ತೋರಿದ ದಿಟ್ಟತನ, ಧೈರ್ಯ ಇಂದಿನ ದಿನಗಳಲ್ಲಿ ಎಲ್ಲ ಮಹಿಳೆಯರು ನೀಜ ಜೀವನದಲ್ಲಿ ಆಚರಣೆಗೆ ತಂದರೇ ಹೆಣ್ಣು ಭ್ರೂಣ ಹತ್ಯೆ, ದೌರ್ಜನ್ಯದಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪಟ್ಟಣದಲ್ಲಿ ಅಕ್ಕಮಹಾದೇವಿ ಪುತ್ಥಳಿ ನಿರ್ಮಾಣ ಆಗಬೇಕು ಎನ್ನುವುದು ಮಹಿಳೆಯರ ಬಹು ದಿನಗಳ ಬೇಡಿಕೆ ಆಗಿತ್ತು. ಅದರಂತೆ ಚನ್ನಬಸವಾಶ್ರಮದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದ ಮೇರೆಗೆ ಅಕ್ಕಮಹಾದೇವಿ ಪುತ್ಥಳಿಗೆ ದೇಣಿಗೆ ಮತ್ತು ಅನಾವರಣಕ್ಕೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, 12ನೆಯ ಶತನಮಾನದಲ್ಲಿ ಅಕ್ಕಮಹಾದೇವಿ ಅವರಿಗೆ ಅರಸೊತ್ತಿಗೆ ವೈಭವ ಇದ್ದರೂ ಅದನ್ನು ಧಿಕ್ಕರಿಸಿ ಮಹಿಳೆಯರ ಸಬಲೀಕರಣಕ್ಕಾಗಿ ಕ್ರಾಂತಿ ನಡೆಸಿದರು. ಜೀವನದಲ್ಲಿ ನಿಂದನೆ, ಟೀಕೆ ಬಂದರೂ ಹೇಗೆಲ್ಲ ಎದುರಿಸಬೇಕು ಎನ್ನುವುದು ಅಕ್ಕಮಹಾದೇವಿ ಅವರು ತಮ್ಮ ವಚನದಲ್ಲಿ ಬಹಳ ಸುಂದರವಾಗಿ ವಿವರಿಸಿದ್ದಾರೆ. ಜೀವನ ಸಾರ್ಥಕತೆಗೆ ಎಲ್ಲ ಮಹಿಳೆಯರು ಅಕ್ಕನ ವಚನ ತಪ್ಪದೇ ಪಠಣ ಮಾಡಬೇಕು ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಪ್ರಮುಖರಾದ ಶುಭಾಂಗಿ ಬಳತೆ, ಅಕ್ಷತಾ ಅಷ್ಟೂರೆ, ಪ್ರಭಾ ಕರಕಾಳೆ, ಸಾವಿತ್ರಿ ಪಾಟೀಲ್, ಸರೋಜನಿ ಪಾಟೀಲ್, ಗೀತಾ ಕರಕಾಳೆ, ಶೋಭಾ ಸಾವಳೆ, ಗಂಗಾ ಅಷ್ಟೂರೆ, ಸ್ವರೂಪಾ ಬಳತೆ, ಇಂದುಮತಿ ಮಾನಕಾರಿ, ಸಂತೋಷಿ ಹುಣಜೆ, ಪವಿತ್ರ ಮುರಾಳೆ, ವಿಮಲಾಬಾಯಿ ಚಾಕೂರೆ, ಸಿದ್ದು ತುಗಶೆಟ್ಟೆ, ವಿಜಯಕುಮಾರ ಸಜ್ಜನ್ ಸೇರಿದಂತೆ ಹಲವರು ಇದ್ದರು.