ಅಕ್ಕಮಹಾದೇವಿ ವಚನಗಳು ಮನುಕುಲಕ್ಕೆ ದಾರಿದೀಪ

ಭಾಲ್ಕಿ:ಮಾ.27: ಅಕ್ಕಮಹಾದೇವಿ ಚಿಂತನೆಗಳು, ತತ್ವಗಳು, ವಚನಗಳು ಮನುಕೂಲಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಪ್ರತಿಷ್ಠಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡದ ಮೊದಲ ಕವಿಯಿತ್ರಿ ಅಕ್ಕಮಹಾದೇವಿ ಒಬ್ಬ ಶ್ರೇಷ್ಠ ವಚನಕಾರ್ತಿಯಾಗಿ ತನ್ನ ವಚನಗಳ ಮೂಲಕ ಸ್ತ್ರೀ ಸ್ವಾತಂತ್ರ ಮತ್ತು ಸಮಾನತೆಗೆ ಧ್ವನಿಯೆತ್ತಿಯೆತ್ತಿದರು. ಅಕ್ಕಮಹಾದೇವಿ ಅವರ ಒಂದೊಂದು ವಚನಗಳಲ್ಲಿ ಬದುಕಿನ ಮೌಲ್ಯ ಅಡಗಿವೆ. ಅವುಗಳನ್ನು ಅನುಸರಿಸಿ ನಡೆದರೇ ಬದುಕು ಸುಂದರವಾಗುತ್ತದೆ ಎಂದರು.

ಮೊದಲಿನಿಂದಲೂ ಹಿರೇಮಠ ಸಂಸ್ಥಾನ ಮತ್ತು ನಮ್ಮ ಪರಿವಾರಕ್ಕೂ ಅವಿನಾಭಾವ ಸಂಬಂಧ ಇದೆ. ನಮ್ಮ ತಾಯಿ ತಂದೆ ಡಾ.ಚನ್ನಬಸವ ಪಟ್ಟದ್ದೇವರ ಪರಮ ಶಿಷ್ಯರಾಗಿದ್ದರು. ನಮ್ಮ ತಾಯಿ ಲಕ್ಷ್ಮೀಬಾಯಿ ಅವರು ತುಂಬು ಕುಟುಂಬವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಉತ್ತಮ ಸಂಸ್ಕಾರ ಕಲ್ಪಿಸಿದರ ಪರಿಣಾಮ ನಾವು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವಂತಾಗಿದೆ. ತಾಯಿಯ ಪ್ರೀತಿ, ವಾತ್ಸಾಲ್ಯ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಸಾಧಕಿ ಕವಿತಾ ಮಿಶ್ರಾ ಮಾತನಾಡಿ, 12ನೆಯ ಶತಮಾನದಲ್ಲಿ ಅಕ್ಕಮಹಾದೇವಿ, ಬಸವಣ್ಣನವರು ಸ್ತ್ರೀ ಸಮಾನತೆ ಸಾರಿದರ ಪರಿಣಾಮ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಿದೆ. ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ತತ್ವ ಪ್ರತಿಯೊಬ್ಬರು ಅನುಸರಿಸಿ ನಡೆದರೇ ಬದುಕು ಹಸನಾಗಲಿದೆ ಎಂದರು.

ತಡೋಳಾ-ಮೇಹಕರ್ ಹಿರೇಮಠ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯರು, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಬೀದರ್ ಲಿಂಗಾಯತ ಮಠದ ಅಕ್ಕ ಡಾ.ಅನ್ನಪೂರ್ಣತಾಯಿ, ಆಣದೂರು ವರಜ್ಯೋತಿ ಭಂತೇಜಿ ಮಾತನಾಡಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಅಕ್ಕಮಹಾದೇವಿ ಅವರ ಜೀವನ ಸಂದೇಶ ಪ್ರತಿಯೊಬ್ಬರ ಬದುಕಿಗೂ ಆದರ್ಶಪ್ರಾಯವಾಗಿವೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಕ್ಕಮಹಾದೇವಿ ಅವರು ತಮ್ಮ ವಚನದಲ್ಲಿ ಹೇಳಿದಂತೆ ಲೋಕದಲ್ಲಿ ಹುಟ್ಟಿದ ಬಳಿಕ ಸ್ತೂತಿ, ನಿಂದನೆಗಳಿಗೆ ಕಿವಿಗೂಡದೇ ಸಮಾಧಾನದಿಂದ ಇದ್ದರೇ ಸಂತೃಪ್ತಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಡಾ.ಗಂಗಾಂಬಿಕಾ ತಾಯಿ, ಮಾತೆ ಪ್ರಭಾವತಿತಾಯಿ, ಮಾತೆ ನೀಲಾಂಬಿಕಾ ತಾಯಿ ಡಾ.ಗೀತಾ ಈಶ್ವರ ಖಂಡ್ರೆ, ನಾಗಮ್ಮ ಬಸವರಾಜ ಪಾಟೀಲ್, ಶುಭಾಂಗಿ ಬಳತೆ, ಜೀವಲತಾ ಸಿಸ್ಟರ್ ಸೇರಿದಂತೆ ಹಲವರು ಇದ್ದರು.

ವಿಶ್ವಗುರು ಬಸವಣ್ಣನವರ, ಅಕ್ಕಮಹಾದೇವಿ ಮೂರ್ತಿಗೆ ಸಿದ್ದಯ್ಯ ಕವಡಿಮಠ, ವಿಶ್ವನಾಥಪ್ಪ ಬಿರಾದಾರ್ ಪೂಜೆ ನೆರವೇರಿಸಿದರು

ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಸ್ವಾಗತಿಸಿದರು. ಆರತಿ ಪಾತ್ರೆ, ದೀಪಕ ಠಮಕೆ ನಿರೂಪಿಸಿದರು.


ಅಕ್ಕಮಹಾದೇವಿ ಪುತ್ಥಳಿ ಅನಾವರಣ

ಇಲ್ಲಿಯ ಚನ್ನಬಸವಾಶ್ರಮ ಪರಿಸರದ ಡಾ.ಚನ್ನಬಸವ ಪಟ್ಟದ್ದೇವರ ಗದ್ದುಗೆಯ ಬಲಭಾಗದಲ್ಲಿ ಲಕ್ಷ್ಮೀಬಾಯಿ ಭೀಮಣ್ಣ ಖಂಡ್ರೆ ಪ್ರತಿಷ್ಠಾನದ ವತಿಯಿಂದ ಸ್ಥಾಪನೆ ಮಾಡಿರುವ ಅಕ್ಕಮಹಾದೇವಿ ಪುತ್ಥಳಿ ಕೃಷಿ ಸಾಧಕಿ ಕವಿತಾ ಮಿಶ್ರಾ ಅವರು ಪುತ್ಥಳಿ ಅನಾವರಣ ಮಾಡಿದರು.

ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಶಿವಾನಂದ ಸ್ವಾಮೀಜಿ, ರಾಜೇಶ್ವರ ಶಿವಾಚಾರ್ಯರು, ಅಕ್ಕ ಅನ್ನಪೂರ್ಣತಾಯಿ, ಡಾ.ಗಂಗಾಂಬಿಕಾತಾಯಿ, ಶಾಸಕ ಈಶ್ವರ ಖಂಡ್ರೆ, ಡಾ.ಗೀತಾ ಈಶ್ವರ ಖಂಡ್ರೆ ಸೇರಿದಂತೆ ಹಲವರು ಇದ್ದರು. ನಾಗಮ್ಮ ಬಸವರಾಜ ಪಾಟೀಲ್ ಷಟಸ್ಥಲ ಧ್ವಜಾರೋಹಣ ನೆರವೇರಿದರು. ಸವಿತಾ ಭೂರೆ ವಚನ ಪ್ರಾರ್ಥನೆ ನಡೆಸಿಕೊಟ್ಟರು.


ಡಾ.ಚನ್ನಬಸವ ಪಟ್ಟದ್ದೇವರಿಗೆ ಅಕ್ಕಮಹಾದೇವಿ ಹಾಗೂ ಮಹಿಳೆಯರ ಬಗ್ಗೆ ಅಪಾರ ಗೌರವ ಇತ್ತು. ಅಂತಹ ಪೂಜ್ಯರ ಗದ್ದುಗೆಯ ಬಲಭಾಗದಲ್ಲಿ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಂಡಿರುವುದು ಸಂತಸ ತರಿಸಿದೆ. ಪುತ್ಥಳಿಗೆ ದಾಸೋಹ ನೀಡಿದ ಶಾಸಕ ಈಶ್ವರ ಖಂಡ್ರೆ ಅವರಿಗೆ ಅಭಿನಂದನೆಗಳು.

ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ