ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು: ಡಾ. ಮಧುಬಾಲಾ ಲಿಗಾಡೆ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.25:ಕರ್ನಾಟಕ ಸರ್ಕಾರ ಜಯದೇವಿತಾಯಿ ಲಿಗಾಡೆಯವರ ಹೆಸರಿನಿಂದ ಸೊಲ್ಲಾಪುರದಲ್ಲಿ ಪ್ರಾಧಿಕಾರವನ್ನು ನಿರ್ಮಿಸಬೇಕು ಹಾಗೂ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಅಷ್ಟೇ ಅಲ್ಲದೇ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಜಯದೇವಿತಾಯಿ ಲಿಗಾಡೆಯವರ ಜನ್ಮದಿನವನ್ನು ಆಚರಿಸಬೇಕೆಂದು ಡಾ. ಮಧುಬಾಲಾ ಲಿಗಾಡೆ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಎರಡನೆ ದಿನದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರಕಾರ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಿಂದ ಅಧ್ಯಯನ ಕೇಂದ್ರ ಸ್ಥಾಪಿಸುವುದು ತೀರಾ ಅಗತ್ಯವಿದೆ. ಅವರ ಹೆಸರಿನಲ್ಲಿ ಸೊಲ್ಲಾಪುರದಲ್ಲಿಯೂ ಪ್ರಾಧಿಕಾರವನ್ನು ನಿರ್ಮಿಸಬೇಕು ಎಂದು ಪ್ರತಿಪ್ರಾದಿಸಿದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಪಿ.ಬಿ.ಬಿರಾದಾರ ಅವರು ಉಪನ್ಯಾಸ ನೀಡಿ ಮಾತನಾಡಿ, ಜಾನಪದ ಭೀಷ್ಮ ಡಾ. ಸಿಂಪಿ ಲಿಂಗಣ್ಣನವರು ಚಡಚಣದಲ್ಲಿನ ಅಪರೂಪದ ಸಾಹಿತಿಗಳು . ಅವರ ಕೃತಿಗಳು ಅತ್ಯಂತ ಮೌಲಿಕವಾದವುಗಳು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಗಡಿನಾಡ ನುಡಿ ಜ್ಯೋತಿ ಡಾ ಜಯದೇವಿತಾಯಿ ಲಿಗಾಡೆಯವರ ಕುರಿತು ಶಿಕ್ಷಕಿ ಶಿಲ್ಪಾ ಗಂಗಾಧರ ಭಸ್ಮೆ ಅವರು ಉಪನ್ಯಾಸ ನೀಡಿ, ಕುಟುಂಬ ವತ್ಸಲೆ ಸಾಹಿತ್ಯಸಾಧಕಿ ಸಮಾಜ ಸೇವಕಿ ಹೀಗೆ ತ್ರಿವೇಣಿ ಸಂಗಮವಾದಂತಹ ಡಾ. ಜಯದೇವಿತಾಯಿ ಲಿಗಾಡೆಯವರ ಜೀವನ ದರ್ಶನ ಒಂದು ಯಶೋಗಾಥೆ. ಅವರು ಕನ್ನಡ ನಾಡಿಗಾಗಿ ಮಾಡಿದಂತಹ ಸೊಲ್ಲಾಪುರದ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತು ಕನ್ನಡ ಕೋಟೆಯನ್ನು ಕಟ್ಟಿದ ಬಗ್ಗೆ, ಕರ್ನಾಟಕ ಏಕೀಕರಣ ಮಾಡಲು ಅವರು ಪಟ್ಟ ಪರಿಶ್ರಮ,ಅವರು ಹೋರಾಟ ಮಾಡಿದಂತಹ ಅಪರೂಪದ ಹೆಜ್ಜೆಗಳ ಬಗ್ಗೆ ಬೆಳಕು ಚೆಲ್ಲಿದರು.
ಉಪನ್ಯಾಸ-3ರಲ್ಲಿ “ಡಾ. ದ. ರಾ ಬೇಂದ್ರೆಯವರ ಕುರಿತಾಗಿ ಸಾಹಿತ್ಯ ಚಿಂತನೆ” ಎಂಬ ವಿಷಯದ ಮೇಲೆ ಪಿಡಿಜೆ ಪಪೂ ಕಾಲೇಜ ಪೆÇ್ರ. ಸಂತೋಷ ಕುಲಕರ್ಣಿ ಉಪನ್ಯಾಸ ನೀಡಿ, ಡಾ. ದ.ರಾ.ಬೇಂದ್ರೆ ಅವರು ಒಬ್ಬ ಭಾವಗೀತೆಗಳ ಯುಗ ಪ್ರವರ್ತಕ ಕವಿ ಎಂದು ಹೇಳಿದರು. ಬೇಂದ್ರೆಯವರ ನಾಕುತಂತಿ ಮತ್ತು ಸಖಿಗೀತದ ಬಗ್ಗೆ ವಿವರಣಾತ್ಮಕವಾಗಿ ಮಾರ್ಮಿಕವಾಗಿ ವಿವರಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶಾಳ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಾಹಿತ್ಯ ಪರಿಷತ್ತು ನಿರಂತರವಾಗಿ ಇಂತಹ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವುದು ನಮ್ಮ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಅವರು ಜಯದೇವಿತಾಯಿ ಲಿಗಾಡೆ, ದ. ರಾ ಬೇಂದ್ರೆ ಹಾಗೂ ಡಾ ಸಿಂಪಿ ಲಿಂಗಣ್ಣರ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ. ಯುವ ಪೀಳಿಗೆ ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಕನ್ನಡಾಂಬೆಯ ಸೇವೆ ಮಾಡಬೇಕೆಂದರು.
ಶಾಂತ ಗಂಗಾಧರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸೋಮಶೇಖರ ಜಮಶೆಟ್ಟಿ, ನಿಜು ಮೇಲಿನಕೇರಿ, ನೀಲಾ ಇಂಗಳೆ, ಡಾ. ಮಾಧವ ಗುಡಿ, ಸಿದ್ರಾಮಯ್ಯ ಲಕ್ಕುಂಡಿಮಠ, ಕಮಲಾ ಮುರಾಳ, ಅಭಿಷೇಕ ಚಕ್ರವರ್ತಿ, ಮಹ್ಹದಗೌಸ ಹವಾಲ್ದಾರ ಉಪಸ್ಥಿತರಿದ್ದರು.
ಬಸವರಾಜ ಅಗಸರ ಸ್ವಾಗತಿಸಿದರು. ಸುನಂದಾ ಯಂಪೂರೆ ನಿರೂಪಿದರು. ಭಾಗ್ಯಶ್ರೀ ಬಡಿಗೇರ ವಂದಿಸಿದರು.