ಅಕ್ಕಮಹಾದೇವಿಯ ಬದುಕು ಬರಹ ಮನುಕುಲಕ್ಕೆ ದಾರಿದೀಪ: ಡಾ. ಬಸವಲಿಂಗ ಪಟ್ಟದ್ದೇವರು

ಬಸವಕಲ್ಯಾಣ: ಎ.9:12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮದೇವರ ನಡುವೆ ನಡೆದ ಸಂವಾದ ಅಧ್ಯಾತ್ಮ ಜಗತ್ತಿನಲ್ಲಿ ಅಪರೂಪದ್ದು, ಅಕ್ಕಮಹಾದೇವಿಯ ಬದುಕು ಬರಹ ಮನುಕುಲಕ್ಕೆ ದಾರಿದೀಪ ಎಂದು ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

ಅವರು ಇಲ್ಲಿನ ಬಂದವರ ಓಣಿಯ ಅಕ್ಕಮಹಾದೇವಿ ಗವಿಯಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಬಸವಕಲ್ಯಾಣ ಸಂಯುಕ್ತಾಶ್ರಯದಲ್ಲಿ ನಡೆದ ವೀರವೈರಾಗ್ಯನಿ ಅಕ್ಕಮಹಾದೇವಿಯವರ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ 12ನೇ ಶತಮಾನದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬರುವ ಪರಿಸ್ಥಿತಿ ಇರಲಿಲ್ಲ ಅಂತಹ ಸಮಯದಲ್ಲಿ ಸ್ತ್ರೀ-ಪುರುಷರು ಸಮಾನರು ಎಂದು ಹೇಳಿಕೊಟ್ಟಿದ್ದೆ ಶರಣರು ಎಂದರು.

ಬಸವ ಮಹಾಮನೆ ಟ್ರಸ್ಟ ಅಧ್ಯಕ್ಷ ಡಾ. ಸಿದ್ಧರಾಮ ಶರಣರು ಬೆಲ್ದಾಳ ಅವರು ಅಕ್ಕನ ಯೋಗಾಂಗ ತ್ರಿವಿ ಕುರಿತು ಅನುಭಾವ ನೀಡಿ ಮಾತನಾಡಿ, ಅಕ್ಕ ವಚನಗಳ ಜೊತೆ ಯೋಗಾಂಗ ತ್ರಿವಿ ರಚಿಸಿದ್ದಾರೆ. ಅಷ್ಟಾಂಗ ಯೋಗಗಳಿಗಿಂತ ಇಷ್ಟಲಿಂಗಯೋಗ ಅತ್ಯಂತ ಶ್ರೇಷ್ಠ ಯೋಗ. ಪ್ರತಿದಿನ ಎಲ್ಲರೂ ಪೂಜಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು

ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದ ಅಧ್ಯಕ್ಷ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಅವರು ಸ್ರ್ತೀ ಮುಂದಾಳತ್ವದ ಪ್ರಗತಿ ಕುರಿತು ಮಾತನಾಡಿ, ಈಗ ಭಾರತ ದೇಶ ಹೆಣ್ಣು ಮಕ್ಕಳ ವಿಕಾಸ ಧೋರಣೆಯನ್ನು ದಾಟಿ ಹೆಣ್ಣು ಮಕ್ಕಳಿಂದ ವಿಕಾಸ ಈ ದಾರಿಯಲ್ಲಿ ನಡೆದಿದೆ ವಿಶೇಷವಾಗಿ ಕಳೆದ 10 ವರ್ಷಗಳ ಆ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಸ್ತ್ರೀಯರ ಸಾಧನೆಗಳು ಶ್ರೇಷ್ಠವಾಗಿದ್ದು ದೇಶದ ಎಲ್ಲಾ ಅಂಗಗಳಲ್ಲಿ ಹೆಚ್ಚಿನ ಗತಿ ಮತ್ತು ವಿಸ್ತಾರ ಹೊಂದಿ ಮುನ್ನಡೆಯುತ್ತಿದೆ. ಇನ್ನು ಮುಂದಿನ ಕಾಲ ಸ್ತ್ರೀ ಮುಂದಾಳತ್ವದ ವಿಕಾಸದ ಕಾಲವಾಗಿದ್ದು ದೇಶ ಜಗತ್ತಿನಲ್ಲಿ ಒಂದನೇ ಮೆಟ್ಟಿಲು ತಲುಪುತ್ತದೆಂದು ದೃಢ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ತ್ರೀ ಮುಂದಾಳತ್ವದ ವಿಕಾಸಕ್ಕೆ 12ನೇ ಶತಮಾನದ ಶರಣೆಯರ ತತ್ತ್ವ ಮತ್ತು ವಿಚಾರಗಳು ಜೀವಶಕ್ತಿಯಾಗಿ ಕಾರ್ಯ ಮಾಡುತ್ತವೆಂದು ನುಡಿದರು.

ಡಾ. ಅಮರನಾಥ ಸೋಲಪುರೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಡಿಪಿಸಿ ನಿರ್ದೇಶಕಿ ಪ್ರೊ. ವಿಜಯಲಕ್ಷ್ಮಿ ಗಡ್ಡೆ ಮಾತನಾಡಿ, ಮಹಿಳೆಯರು ಸಂಕುಚಿತ ಭಾವನೆ ತೊರೆದು ವಿಶಾಲ ಪ್ರಪಂಚದಲ್ಲಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟವರೆ ಅಕ್ಕಮಹಾದೇವಿ ಇವರು ಮಹಿಳಾ ಸಬಲೀಕರಣದ ಬಗ್ಗೆ ಅಂದೇ ಚಿಂತಿಸಿದರು ಎಂದರು.

ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಮುಖ್ಯ ಶಿಕ್ಷಕಿ ವಿದ್ಯಾರಾಣಿ ಪ್ರಕಾಶ ಬಿರಾದರ, ಸುಲೋಚನಾ ಶಿವಬಸಪ್ಪ ಗುದಗೆ, ಗೌರಮ್ಮಾ ಶರಣಪ್ಪ ಬೆಳ್ಳೆ, ಪ್ರಣಿತಾ ಕರಾಡೆ ಅವರನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಶಾಮಾ ರಗಟೆ, ರಾಜಶ್ರೀ ಖೂಬಾ, ಶ್ರೀದೇವಿ ಭೂಮಾ ಉಪಸ್ಥಿತರಿದ್ದರು. ನಿರ್ಮಲಾ ಶಿವಣಕರ್ ಧ್ವಜಾರೋಹಣ ನೆರವೇರಿಸಿದರೆ, ಮಹಾದೇವಿ ಪಟವಾರಿ ವಚನ ಗಾಯನ ಮಾಡಿದರು. ಅನಿಲಕುಮಾರ ರಗಟೆ, ಜಗನ್ನಾಥ ಖೂಬಾ, ಬಸವರಾಜ ಬಾಲಿಕಿಲೆ, ರೇವಣಪ್ಪಾ ರಾಯವಾಡೆ, ಶಿವರಾಜ ಶಾಶೆಟ್ಟಿ, ಮಲ್ಲಿಕಾರ್ಜುನ ಕುರಕೊಟೆ, ಗುರುನಾಥ ಗಡ್ಡೆ ಸೇರಿದಂತೆ ಇತರರಿದ್ದರು. ರೇಖಾ ಗುದಗೆ ನಿರೂಪಿಸಿದರೆ ತ್ರೀಷಾ ಶೇರಿಕಾರ ಮತ್ತು ಆಜ್ಞಾ ಅವರಿಂದ ವಚನ ನೃತ್ಯ ಜರುಗಿದವು.

ಸಾಮೂಹಿಕ ಇಷ್ಟಲಿಂಗಯೋಗ: ಜಯಂತಿಯ ನಿಮಿತ್ಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ಸಾನಿಧ್ಯದಲ್ಲಿ ಪೂಜ್ಯ ಸತ್ಯದೇವಿತಾಯಿಯವರ ನೇತೃತ್ವದಲ್ಲಿ 8 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಸಾಮೂಹಿಕ ಇಷ್ಟಲಿಂಗಯೋಗ ನಡೆಯಿತು ನಂತರ ಅಕ್ಕಮಹಾದೇವಿ ಗವಿಯ ಮಹಾದ್ವಾರದಿಂದ ಗವಿಯವರೆಗೆ ಅಕ್ಕಮಹಾದೇವಿತಾಯಿಯವರ ಭಾವಚಿತ್ರದ ಮೆರವಣಿಗೆ ನಡೆಯಿತು. ಪೂಜ್ಯ ಗಾಯತ್ರಿತಾಯಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಅಕ್ಕಮಹಾದೇವಿ ಭಜನಾ ತಂಡ, ನೀಲಾಂಬಿಕಾ ಭಜನಾ ತಂಡ ಪ್ರತಾಪೂರ ಮಹಾದೇವ ಭಜನಾ ತಂಡ, ಅಕ್ಕನಾಗಮ್ಮ ಭಜನಾ ತಂಡ ಕಲ್ಯಾಣಮ್ಮ ಭಜನಾ ತಂಡ ಅರಿವಿನ ಮನೆ ಭಜನಾ ತಂಡ, ಅಕ್ಕಮಹಾದೇವಿ ಭಜನಾ ತಂಡ ಮಂಠಾಳ ಹಾಗೂ ರೇವಣ್ಣಸಿದ್ದೇಶ್ವರ ಭಜನಾ ತಂಡಗಳಿಂದ ವಚನ ಭಜನೆಗಳು ನಡೆದವು. ಮೆರವಣೀಗೆಯಲ್ಲಿ ಅಕ್ಕಮಹಾದೇವಿಯ ವೇಷಭೂಷಣ ಧರಿಸಿದ ಮಕ್ಕಳು ಗಮನ ಸೆಳೆದವು ನಂತರ ತೊಟ್ಟಿಲು ಕಾರ್ಯಕ್ರಮ ಜರುಗಿತು.