ಅಕ್ಕಮಹಾದೇವಿಯ ಜೀವನವೇ ಒಂದು ಸಂದೇಶ

ಭಾಲ್ಕಿ:ಅ.17:ಪಟ್ಟಣದ ಶ್ರೀ ಚನ್ನಬವಾಶ್ರಮದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ, ಶರಣ ಸಂಕುಲದಲ್ಲಿ ಭಾಗಿಯಾಗಿರುವ ಅಕ್ಕಮಹಾದೇವಿಯ ಜೀವನವೇ ಒಂದು ಶ್ರೇಷ್ಠ ಸಂದೇಶವಾಗಿದೆ. ಜೀವನದಲ್ಲಿ ಕಷ್ಟ, ನೋವು, ನಲಿವು ಇದ್ದದ್ದೆ ಅದನ್ನು ಮೀರಿ ನಮ್ಮ ಜೀವನ ಉನ್ನತ ಮಾಡಿಕೊಳ್ಳಬೇಕಾದರೆ ಅಕ್ಕಮಹಾದೇವಿಯ ಆದರ್ಶವನ್ನು ಆಚರಿಸಬೇಕು. ಎಂತಹ ಕಷ್ಟದ ಪ್ರಸಂಗದಲ್ಲಿಯು ತಾಳ್ಮೆಯನ್ನು ಕಳೆದುಕೊಳ್ಳದೆ ಸಮಚಿತ್ತದಿಂದ ಬಾಳಬೇಕು. ಅದಕ್ಕೆ ಅಕ್ಕಮಹಾದೇವಿಯವರು ಲೋಕದ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂದು ಹೇಳುತ್ತಾಳೆ. ಈ ಒಂದು ವಿಚಾರವನ್ನು ನಾವು ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ನಮ್ಮ ಜೀವನ ಶ್ರೇಷ್ಠ ಜೀವನ ಆಗುತ್ತದೆ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶರಣೆ ಸಾವಿತ್ರಿ ಧನರಾಜ ಪಾಟೀಲ ಅವರು ವಹಿಸಿದರು. ಶರಣೆ ಪ್ರಿಯಾ ಮಹಾಂತೇಶ ದಶಮುಖೆ ಇವರು ಅಕ್ಕಮಹಾದೇವಿಯ ವೇಷಭೂಷಣ ಧರಿಸಿದರು. ಇವರಿಂದ ಶ್ರೀಮಠದಿಂದ ಪ್ರಕಟವಾದ ಅಕ್ಕಮಹಾದೇವಿಯ ಭಜನೆ ಮಾಲಿಕೆ ಗ್ರಂಥ ಲೋಕಾರ್ಪಣೆ ಮಾಡಲಾಯಿತು.  ಅಕ್ಕಮಹಾದೇವಿಯ ಕುರಿತು ಕು. ಚಂದನಾ ಶಾಂತಯ್ಯ ಸ್ವಾಮಿ ಅನುಭಾವ ನೀಡಿದರು. ಸಂಗೀತಾ ಸುರೇಶ ಪುರಂತ ಅವರಿಂದ ವಚನ ಸಂಗೀತ ನಡೆಯಿತು. ಪಾರ್ವತಿ ಚಂದ್ರಕಾಂತ ಡೋಣಗಾಪೂರೆ ಅವರಿಂದ ಸ್ವಾಗತ ಕೋರಲಾಯಿತು. ಸ್ವರೂಪ ಬಳತೆ ಮತ್ತು ಬಳಗದಿಂದ ಪೂಜೆ ನೆರವೇರಿಸಲಾಯಿತು. ರತ್ನಮ್ಮ ವಿಜಯಕುಮಾರ ಹಾಲಕುಡೆ ಅವರಿಂದ ಧರ್ಮ ಗ್ರಂಥ ಪಠಣ ಮಾಡಲಾಯಿತು. ಮೀನಾಕ್ಷಿ ಪ್ರಭಾ ನಿರೂಪಿಸಿದರು. ಗಂಗಾ ಅಷ್ಟೂರೆ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ಸೇವಾ ಸಮಿತಿಯ ಅಧ್ಯಕ್ಷರು ಶರಣ ಸುವರ್ಣಾ ಬಲ್ಲೂರೆ, ಶರಣೆ ಮಲ್ಲಮ್ಮ ನಾಗನಕೇರೆ ಹಾಗೂ ಇನ್ನಿತರ ಅಕ್ಕನಬಳಗದ ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.