ಅಕ್ಕನಿಗೆ ಸೈನೆಡ್ ತಿನ್ನಿಸಿ ಕೊಲೆ :ಇಬ್ಬರ ಸೆರೆ

ಬೆಂಗಳೂರು,ನ.೨೭- ಜಾಗದ ವಿಚಾರಕ್ಕೆ ಉಂಟಾದ ಮನಸ್ತಾಪದಲ್ಲಿ ಆಕ್ರೋಶಗೊಂಡು ಸುಪಾರಿ ನೀಡಿ ಸ್ವಂತ ಅಕ್ಕನಿಗೆ ಸೈನೆಡ್ ಕೊಟ್ಟು ಕೊಲೆ ಮಾಡಿಸಿ ಮೃತದೇಹವನ್ನು ನಾಲೆಗೆ ಎಸೆದ ಪ್ರಕರಣವನ್ನು ಬೇಧಿಸಿರುವ ಸುಬ್ರಹ್ಮಣ್ಯನಗರ ಪೊಲೀಸರು ತಮ್ಮ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಾಜಿನಗರದ ಸೀತಾ (೪೭)ರನ್ನು ಸುಪಾರಿ ಪಡೆದು ಹತ್ಯೆ ಮಾಡಿದ್ದ ಸತ್ಯ ಹಗೂ ನೂರ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ.
ಅರೋಪಿಗಳಿಗೆ ಕೊಲೆಗೆ ಸುಪಾರಿ ನೀಡಿದ್ದ ಮೃತ ಸೀತಾ ಸಹೋದರ ವೆಂಕಟೇಶ್ ಆಚಾರ್ ಪರಾರಿಯಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ವಸಂತರಾವ್ ಪಾಟೀಲ್ ತಿಳಿಸಿದ್ದಾರೆ.
ಅಕ್ಕನ ನಾಪತ್ತೆ ದೂರು ನೀಡಿದ್ದ ತಮ್ಮ ಜಾಗದ ವಿಚಾರಕ್ಕೆ ರಾಜಾಜಿನಗರದಲ್ಲಿ ಸೀತಾರನ್ನು ಕೊಲೆ ಮಾಡಿಸಿ ಬಳಿಕ ಅಕ್ಕ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದು ಈ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಈಗಾಗಲೇ ಇಬ್ಬರು ಮೃತಪಟ್ಟಿದ್ದು,೭ ತಿಂಗಳ ಹಿಂದೆ ನಡೆದ ಭಯಾನಕ ಕೊಲೆಯ ರಹಸ್ಯವನ್ನು ಈಗ ಪೊಲೀಸರು ಭೇದಿಸಿದ್ದಾರೆ.
ನೂರ್ ಅಹ್ಮದ್ ಹಾಗೂ ಸತ್ಯ ಬಂಧಿತರಾಗಿದ್ದು,ಇನ್ನುಳಿದ ಇಬ್ಬರು ಮೆಂಟಲ್ ರಘು, ಕುಮಾರ ಸಾವನ್ನಪ್ಪಿದ್ದಾರೆ.
ಮಂತ್ರಾಲಯ ಮೂಲದ ಸೀತಾ ರಾಜಾಜಿನಗರದಲ್ಲಿ ನೆಲೆಸಿದ್ದು ಕಳೆದ ೨೦೨೧ ಮಾರ್ಚ್ ೨೬ಕ್ಕೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಅಕ್ಕ ಕಾಣೆಯಾಗಿದ್ದಾಳೆ ಎಂದು ಸಹೋದರ ವೆಂಕಟೇಶ್ ಆಚಾರ್ ದೂರು ನೀಡಿದ್ದರು.. ನಾಪತ್ತೆಯಾಗಿದ್ದ ಪ್ರಕರಣದ ಹಿಂದೆ ಬಿದ್ದಿದ್ದ ಸುಬ್ರಹ್ಮಣ್ಯನಗರ ಪೊಲೀಸರಿಗೆ ಸೀತಾಳ ಸುಳಿವೇ ಸಿಕ್ಕಿರಲಿಲ್ಲ. ಇತ್ತೀಚೆಗೆ ಮೊಬೈಲ್ ಕರೆಗಳ ವಿವರ ಆಧರಿಸಿ ಸತ್ಯ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸೀತಾ ತಮ್ಮ ವೆಂಕಟೇಶ್ ಕೊಲೆ ಸುಪಾರಿ ನೀಡಿದ್ದಾಗಿ ಸತ್ಯ ಬಾಯಿಬಿಟ್ಟಿದ್ದಾನೆ.
ಮಂತ್ರಾಲಯದ ಬಳಿಯಿದ್ದ ಜಾಗವನ್ನು ಮಾರಲು ವೆಂಕಟೇಶ್ ಹೊರಟಿದ್ದು ಅದಕ್ಕೆ ಅಕ್ಕನ ಸಹಿ ಬೇಕಾಗಿತ್ತು. ಆದರೆ ಅಕ್ಕ ಸೀತಾ ಸಹಿ ಹಾಕಲು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ನಾಲ್ವರಿಗೆ ೨.೫ ಲಕ್ಷಕ್ಕೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ.
ಆರೋಪಿಗಳು ಚಿನ್ನ ಖರೀದಿ ನೆಪದಲ್ಲಿ ಸೀತಾರನ್ನು ಹಾಸನ ಮಾರ್ಗವಾಗಿ ಕರೆದೊಯ್ದಿದ್ದರು.
ಕಾರಿನಲ್ಲಿ ಆಕೆಗೆ ವಾಂತಿಯಾಗದಂತೆ ನೀಡಿದ ಮಾತ್ರೆ ನೀಡಿದ್ದು ಅದನ್ನು ತಿಂದ ಸ್ವಲ್ಪ ಹೊತ್ತಿಗೆ ಸೀತಾ ಸಾವನ್ನಪ್ಪಿದ್ದರು. ಮೃತದೇಹವನ್ನು ಹೊಸಪೇಟೆ ಹತ್ತಿರದ ನಾಲೆಗೆ ಬಿಸಾಡಿದ್ದಾರೆ.
ಎಷ್ಟೆ ಹುಡುಕಾಟ ನಡೆಸಿದರೂ ಮೃತದೇಹ ಸಿಕ್ಕಿಲ್ಲ. ಹೀಗಾಗಿ ಮೃತದೇಹ ಪತ್ತೆಗೆ ಮುಂದಾಗಿದ್ದು ಇಬ್ಬರು ಆರೋಪಿಗಳು ಮೃತಪಟ್ಟಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇನ್ನು ತಿಳಿದುಬಂದಿಲ್ಲ.