ಅಕಾಲಿಕ ಮಳೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಿಎಂ

ಬೆಂಗಳೂರು,ನ.೨೧- ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ವರದಿಗಳನ್ನು ತರಿಸಿಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ಮಳೆ ಸಂತ್ರಸ್ಥರಿಗೆ ಪರಿಹಾರವನ್ನು ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಬೆಳೆಹಾನಿ, ರಸ್ತೆ, ಸೇತುವೆಗಳು ಹಾಳಾಗಿವೆ. ಕೆಲವೆಡೆ ಪ್ರಾಣಹಾನಿಯೂ ಆಗಿದ್ದು, ಈ ಬಗ್ಗೆ ವರದಿ ತರಿಸಿಕೊಂಡು ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಘೋಷಣೆ ಮಾಡುವುದಾಗಿ ಹೇಳಿದರು.
ಕಳೆದ ಜುಲೈ, ಆಗಸ್ಟ್‌ನಲ್ಲಿ ಇದೇ ರೀತಿ ಮಳೆಯಾಗಿದ್ದ ಹಾನಿಗೆ ೩ ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ. ಇದರಲ್ಲಿ ಬಾಕಿ ಇದ್ದ ೧೩೦ ಕೋಟಿ ರೂ.ಗಳನ್ನೂ ಸಹ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಈಗ ಆಗಿರುವ ಹಾನಿಗೂ ಬೇಗ ಪರಿಹಾರ ನೀಡುವುದಾಗಿ ಹೇಳಿದರು.
ಸಚಿವರು ಜಿಲ್ಲೆಗಳಿಗೆ
ಮಳೆ ಅನಾಹುತಗಳ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಲು ಎಲ್ಲ ಸಚಿವರುಗಳನ್ನು ಜಿಲ್ಲೆಗೆ ಕಳುಹಿಸಿದ್ದೇನೆ. ಈಗಾಗಲೇ ಹಲವು ಸಚಿವರುಗಳು ಜಿಲ್ಲೆಯಲ್ಲಿದ್ದಾರೆ.
ವಿಧಾನ ಪರಿಷತ್‌ನ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸಮೀಕ್ಷೆ ಮತ್ತು ಸಭೆಗಳನ್ನು ನಡೆಸಲು ಅಡ್ಡಿಯಾಗಿದೆ. ಇದಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗದ ಜತೆ ಮಾತನಾಡಿದ್ದೇನೆ. ಇಂದು ಮುಖ್ಯಕಾರ್ಯದರ್ಶಿಗಳು ಪತ್ರ ಬರೆದು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಚುನಾವಣಾ ಆಯೋಗದ ಅನುಮತಿ ಪಡೆಯಲಿದ್ದಾರೆ ಎಂದರು.
ಕೆಲ ಜಿಲ್ಲೆಗಳಲ್ಲಿ ಇನ್ನೂ ಮಳೆ ಬರುತ್ತಿರುವುದರಿಂದ ಬೆಳೆ ಹಾನಿ ಸಮೀಕ್ಷೆ ಸಾಧ್ಯವಾಗಿಲ್ಲ. ಆದರೂ ಕಣ್ಣೋಟದ ಪ್ರಾಥಮಿಕ ಸಮೀಕ್ಷೆಯನ್ನು ನಡೆಸುವಂತೆ ಎರಡು ದಿನಗಳ ಹಿಂದೆ ನಡೆದ ವೀಡಿಯೊ ಸಂವಾದದಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂದು ಸಂಜೆಯೊಳಗೆ ವರದಿಗಳನ್ನು ತರಿಸಿಕೊಂಡು ಚರ್ಚಿಸಿ ಪರಿಹಾರ ಘೋಷಿಸುತ್ತೇನೆ ಎಂದರು.
ಬೆಂಗಳೂರಿಗೂ ವಿಶೇಷ ಕಾಳಜಿ
ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾಗಿದ್ದರೂ ಮುಖ್ಯಮಂತ್ರಿಗಳು ಗಮನ ಹರಿಸಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಅವರು, ಬೆಂಗಳೂರು ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಈಗಾಗಲೇ ಹಲವು ಬಾರಿ ನಗರ ಪ್ರದಕ್ಷಿಣೆ ನಡೆಸಿದ್ದೇನೆ. ಮಳೆ ನಿಂತ ಕೂಡಲೇ ಎಲ್ಲ ಪರಿಹಾರ ಕಾರ್ಯಗಳು ಆರಂಭವಾಗಲಿವೆ ಎಂದರು.

ಚಿಕ್ಕಬಳ್ಳಾಪುರಕ್ಕೆ ಸಿಎಂ

ಮಳೆಯಿಂದ ಹಾನಿಗೀಡಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಆಡಳಿತಾರೂಢ ಬಿಜೆಪಿ ಸರ್ಕಾರ ಜನಸ್ವರಾಜ್ ಯಾತ್ರೆಯಲ್ಲಿ ತಲ್ಲೀನವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಈ ಆರೋಪಗಳ ಬೆನ್ನಲ್ಲೇ ಮುಖ್ಯಮಂತ್ರಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಪರಿಶೀಲಿಸಿ, ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರಿಗೆ ನೆರವಿನ ಭರವಸೆ ನೀಡಲಿದ್ದಾರೆ.